ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ಮೇಲೆ ತಂದೆ ಬಾಲಕೃಷ್ಣ ನಾಯ್ಕ್ ಮಾಡಿರುವ ಆರೋಪಗಳು ಸಂಚಲನ ಸೃಷ್ಟಿ ಮಾಡಿವೆ. ಇತ್ತೀಚೆಗೆ ಚೈತ್ರಾ ಶ್ರೀಕಾಂತ್ ಕಶ್ಯಪ್ ಎಂಬ ಯುವಕನನ್ನು ವಿವಾಹವಾದರೂ, ಈ ಮದುವೆಗೆ ತಂದೆಗೆ ಆಹ್ವಾನ ನೀಡಲಾಗಲಿಲ್ಲ ಎಂಬುದು ಬಾಲಕೃಷ್ಣ ಅವರ ಗಂಭೀರ ಆರೋಪ. ಮದುವೆಯಲ್ಲಿ ತಂದೆಯ ಸ್ಥಾನವನ್ನು ರಜತ್ ಎಂಬವರು ನಿರ್ವಹಿಸಿದ್ದು, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಬಾಲಕೃಷ್ಣ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ, ಚೈತ್ರಾ ಮೋಸ ಮತ್ತು ವಂಚನೆ ಮಾಡಿದ್ದಾಳೆ ಎಂದಿದ್ದಾರೆ. ಅಲ್ಲದೆ ಚೈತ್ರಾ ಪತಿ ಶ್ರೀಕಾಂತ್ ಕೂಡ ಕಳ್ಳನಾಗಿದ್ದಾನೆ ಎಂಬ ಆರೋಪ ಕೂಡ ಮಾಡಿದ್ದಾರೆ. ತನ್ನ ಪತ್ನಿ ಕೂಡ ಚೈತ್ರಾ ಪರವಾಗಿದ್ದು, ಈ ಎಲ್ಲದಕ್ಕೂ ಹಣದ ಆಸೆಯೇ ಕಾರಣವೆಂದು ಹೇಳಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿಯೂ ಹಣ ಹಂಚಿಕೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಚೈತ್ರಾ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ “ಕುಡುಕ ತಂದೆ ಯಾರಿಗೂ ಸಿಗಬಾರದು” ಎಂಬ ಕಠಿಣ ಮಾತುಗಳನ್ನು ಬರೆದಿದ್ದಾರೆ. “ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ’ ಎಂಬ ಮೂಲಕ, ತಂದೆಯ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂದೆ ಹಾಗೂ ಮಗಳ ಈ ವಿವಾದ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.