ಬೆಂಗಳೂರು: ಎಸ್‌ಎಸ್‌ಎಲ್‌ಸಿ , ದ್ವಿತೀಯ ಪಿಯುಸಿಯಲ್ಲಿ ಫೇಲಾದ್ರೂ ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಅದೇ ತರಗತಿಗಳಿಗೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಅದೇ ತರಗತಿಗಳಿಗೆ ಮತ್ತೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದರು.ಪ್ರತಿ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುತ್ತಾರೆ. ಈ ಹಿನ್ನಲೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಅಂತ ಈ ವಿಶೇಷ ಸೌಲಭ್ಯ ನೀಡಲಾಗಿದೆ. ರೆಗ್ಯುಲರ್ ವಿದ್ಯಾರ್ಥಿಗೆ ಸಿಗುವ ಎಲ್ಲ ಅನೂಕೂಲ ಈ ವಿದ್ಯಾರ್ಥಿಗಳಿಗೆ ಸಿಗುತ್ತೆ ಎಂದು ಹೇಳಿದರು.
ಇಲಾಖೆ ಅಡಿಯಲ್ಲಿ ೪೬ ಸಾವಿರ ಶಾಲೆಗಳು ಹಾಗೂ ಕಾಲೇಜು ಬರುತ್ತವೆ. ಇದರಲ್ಲಿ ೧೫ ಸಾವಿರ ಅನುದಾನಿತ ಶಾಲೆಗಳಿವೆ. ೪೨ ಸಾವಿರ ಅತಿಥಿ ಶಿಕ್ಷಕರು ನೇಮಕ ಮಾಡಿದ್ದೇವೆ. ೧೩,೫೦೦ ಸಾವಿರ ಖಾಯಂ ಶಿಕ್ಷಕರ ನೇಮಕ ಮಾಡಿದ್ದೇವೆ. ೧೧,೪೦೦ ಸಾವಿರ ಜನರಿಗೆ ಖಾಯಂ ನೇಮಕಾತಿಯಾಗಿದೆ. ೫೩ ಸಾವಿರ ಖಾಯಂ ಶಿಕ್ಷಕರ ನೇಮಕಾತಿಯಾಗಬೇಕಿದೆ. ಕಳೆದ ೯ ವರ್ಷಗಳಲ್ಲಿ ಅನುದಾನಿತ ಶಾಲೆಗೆ ಒಬ್ಬ ಶಿಕ್ಷರನ್ನು ನೇಮಕ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಅನುದಾನಿತ ಶಾಲೆಗಳಿಗೆ ೫ ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ ಎಂದರು.
ಅನುದಾನಿತ ಶಾಲೆಯ ಎಲ್ಲ ಹುದ್ದೆಗಳಿಗೂ ಮುಂದಿನ ಐದು ವರ್ಷಗಳಲ್ಲಿ ಖಾಯಂ ಶಿಕ್ಷಕರ ನೇಮಕಾತಿ ಆಗಲಿದೆ. ಅನುದಾನಿತ ಕನ್ನಡ ಮಾಧ್ಯಮ ಶಾಲೆ ಉಳಿಸಬೇಕಾಗಿದೆ. ಒಳ್ಳೆಯ ಶಿಕ್ಷಕರು ಇರುವುದು ಕನ್ನಡ ಮಾಧ್ಯಮ ಶಾಲೆಗಳಲ್ಲಿ. ೮, ೯, ೧೦ನೇ ತರಗತಿ ಮಕ್ಕಳಿಗೆ ಮರು ಸಿಂಚನ (ವಿಶೇಷ ವಿಜ್ಞಾನ) ತರಗತಿ ಮಾಡಲಾಗುತ್ತಿದೆ. ಒಟ್ಟು ೮ ಲಕ್ಷ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.