ಮೈಸೂರು: ಮಾನ- ಮರ್ಯಾದೆ ಇಲ್ಲದವರು ಮಾತ್ರ ಲೋಕಾಯುಕ್ತ ವರದಿ ಟೀಕಿಸಬೇಕು ಎಂದು ಬಿಜೆಪಿ ವಿರುದ್ಧ ಸಚಿವ ಬಿ.ಎಸ್. ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿ ಸಲ್ಲಿಸಿರುವ ವರದಿಯನ್ನು ಟೀಕಿಸುತ್ತಿರುವ ಹಾಗೂ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ ಎಂದು ಕಿಡಿ ಕಾರಿದರು.
ನಾವು ಯಾವ ತಪ್ಪನ್ನೂ ಮಾಡಿಲ್ಲ. ಚಾಮುಂಡೇಶ್ವರಿ ಬಳಿ ಪ್ರಮಾಣ ಮಾಡೋಣ ಬನ್ನಿ ಎಂದು ಆಹ್ವಾನಿಸಿದ್ದೆ. ಆದರೆ, ಯಾರೂ ಆಣೆ-ಪ್ರಮಾಣಕ್ಕೆ ಬರಲಿಲ್ಲ. ಈಗ ಲೋಕಾಯುಕ್ತ ವರದಿ ಬಂದಿದೆ. ರಾಜ್ಯದ ಜನರಿಗೆ ಈಗ ಸತ್ಯ ಗೊತ್ತಾಗಿದೆ. ಸಿದ್ದರಾಮಯ್ಯ ಯಾವತ್ತೂ ಅಕ್ರಮ ಅಥವಾ ತಪ್ಪು ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಮೈಸೂರು ಚಲೋ ಪಾದಯಾತ್ರೆ ಮಾಡಿದರು ಎಮದು ಆಕ್ರೋಶ ವ್ಯಕ್ತಪಡಿಸಿದರು.