ಬೆಂಗಳೂರು: ಶಾಲೆಗಳಲ್ಲಿ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಪೊಲೀಸರೊಂದಿಗೆ ಮಾತನಾಡಿದ್ದು, ಎಲ್ಲೆಡೆ ಭದ್ರತೆ ಒದಗಿಸಿ,ಎಚ್ಚರಿಕೆ ಯಿಂದ ಇರಬೇಕು ಸುದ್ದಿ ಮಾಡಿದವರನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪೋಷಕರು ಆತಂಕ ಪಡಬಾರದು. ಈ ಬಗ್ಗೆ ವರದಿ ಪಡೆಯಲಾಗಿದೆ. ಈ ರೀತಿ ಹಿಂದೆಯೂ ಮಾಡಿದ್ದಾರೆ. ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎಂದರು.
ಸಿಲಿಕಾನ್ ಸಿಟಿ ಬೆಂಗಳೂರಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇಂದು ಬೆಳ್ಳಂಬೆಳಗ್ಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಆತಂಕಗೊಂಡ ಪೋಷಕರು ಶಾಲೆ ಬಳಿ ಓಡೋಡಿ ಬಂದು ತಮ್ಮ-ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.