ಸಿದ್ದಾಪುರ : ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ೨೦ ದಿನದ ಮಗುವನ್ನು ಕೊಲ್ಲುವುದಾಗಿ ಚಾಕು ಹಿಡಿದು ಬೆದರಿಕೆ ಹಾಕಿದ್ಧಾನೆ. ಇದರಿಂದ ಆಕ್ರೋಶಗೊಂಡ ಆತನ ಪತ್ನಿಯ ಸಹೋದರರು ಆತನನ್ನೇ ಹತ್ಯೆಗೈದಿದ್ದಾರೆ. ಘಟನೆ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರ ನಿವಾಸಿ ಸಲ್ಮಾನ್ ಖಾನ್ (೨೯) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಆಯೆಷಾ ಅವರ ಸಹೋದರರಾದ ಉಮರ್, ಶೊಯೇಬ್ ಹಾಗೂ ಅನ್ವರ್ ಕೊಲೆಗೈದಿರುವ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಯೆಷಾ ಅವರಿಗೆ ೨೦ ದಿನಗಳ ಹಿಂದೆಯಷ್ಟೇ ಹೆರಿಗೆಯಾಗಿತ್ತು. ತನ್ನ ತವರು ಮನೆಯ ನೆರವಿನಿಂದ ಮಗುವನ್ನು ಸಲಹುತ್ತಿದ್ದರು. ಆದಾಗ್ಯೂ, ಸಲ್ಮಾನ್ ಹಲವು ದಿನಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ದುಡಿಮೆ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ದಿನನಿತ್ಯ ಸಲ್ಮಾನ್ ತನ್ನ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ವೇಳೆ, ಚಾಕು ಹಿಡಿದು ಮಗುವನ್ನು ಕೊಲ್ಲುವುದಾಗಿ ಸಲ್ಮಾನ್ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಆಯೆಷಾ ತನ್ನ ಸಹೋದರರಿಗೆ ಕರೆ ಮಾಡಿ, ಮನೆಗೆ ಕರೆಸಿಕೊಂಡಿದ್ದಾರೆ. ಆಗಲೂ ಸಲ್ಮಾನ್ ಮತ್ತೆ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಆಯೆಷಾ ಸಹೋದರರು ಆ ಚಾಕುವನ್ನು ಕಸಿದುಕೊಂಡು ಆತನಿಗೇ ಚುಚ್ಚಿದ್ದಾರೆ. ಬಳಿಕ, ಆಸ್ಪತ್ರೆಗೆ ರವಾನಿಸಲಾಗಿದ್ದರೂ, ಚಿಕಿತ್ಸೆ ಫಲಿಸದೆ ಸಲ್ಮಾನ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೈದ ಆರೋಪದ ಮೇಲೆ ಆಯೆಷಾ ಅವರ ಮೂವರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.