ಅಯೋಧ್ಯೆ: ಖಲಿಸ್ಥಾನ್ ಪರ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ರಾಮ ಮಂದಿರದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ಸಂದೇಶವನ್ನು ಮಂಗಳವಾರ(ನ12 )ಬಿಡುಗಡೆ ಮಾಡಿದ್ದು, ಅಯೋಧ್ಯೆಯ ರಾಮಮಂದಿರದ ಸುತ್ತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ವಿಡಿಯೋದಲ್ಲಿ, ನಿಷೇಧಿತ ಸಂಘಟನೆಯಾದ ‘ಸಿಖ್ಸ್ ಫಾರ್ ಜಸ್ಟೀಸ್’ ಸಂಸ್ಥಾಪಕ ಪನ್ನುನ್ ನವೆಂಬರ್ 16-17 ರಂದು ರಾಮ ಮಂದಿರದಲ್ಲಿ ಸಂಭವನೀಯ ರಕ್ತಪಾತದ ಬಗ್ಗೆ ಎಚ್ಚರಿಸಿದ್ದು, ಇದು ನವೆಂಬರ್ 18 ರಂದು ನಡೆಯಲಿರುವ ‘ರಾಮ್ ವಿವಾಹ’ ಉತ್ಸವಕ್ಕೆ ಮುನ್ನ ಹರಿಯಬಿಡಲಾಗಿದೆ. ಸಮಾರಂಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾಗಿಯಾಗುವ ಸಾಧ್ಯತೆಗಳಿವೆ.
ಈಗಾಗಲೇ ಬಿಗಿ ಭದ್ರತೆಯಿರುವ ರಾಮ ಜನ್ಮಭೂಮಿ ಸಂಕೀರ್ಣದ ಸುತ್ತಲೂ ಬೆದರಿಕೆಯ ನಂತರ ಪರಿಣಾಮಕಾರಿಕೋಟೆಯಾಗಿ ಮಾರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಲಯದ ಪಟ್ಟಣದ ನಿರ್ಣಾಯಕ ಸ್ಥಳಗಳಲ್ಲಿ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಮತ್ತು ಡ್ರೋನ್ ಕೆಮರಾಗಳ ಮೂಲಕ ಕಣ್ಗಾವಲು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.