ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾದ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡದಲ್ಲಿ ಬಂಧಿಸಲಾಗಿದೆ.
ದಿನಾಂಕ:19-01-2026 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂ.53,03,000 ಮೌಲ್ಯದ 1 ಕ್ವಿಂಟಾಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ತನಿಖೆ ನಡೆಸಿ ಪ್ರಕರಣದ ಆರೋಪಿಗಳಿಗೆ ಹಣ ಮತ್ತು ವಾಹನದ ವ್ಯವಸ್ಥೆಯನ್ನು ಮಾಡಿದ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ ಕೆ (27) ಹಾಗೂ ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝಿರ್ (42) ಎಂಬವರನ್ನು ದಸ್ತಗಿರಿ ಮಾಡಲಾಗಿದೆ ಹಾಗೂ ಆರೋಪಿಗಳಿಗೆ ಮಾದಕವಸ್ತು ಗಾಂಜಾವನ್ನು ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ದೀಪಕ್ ಪಾತ್ರ (37) ಎಂಬಾತನನ್ನು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ರವರ ನೇತೃತ್ವದಲ್ಲಿ, ತನಿಖಾ ತಂಡವು ಒರಿಸ್ಸಾ ರಾಜ್ಯಕ್ಕೆ ತೆರಳಿ ದಸ್ತಗಿರಿ ಮಾಡಿದೆ.
ಈ ವೇಳೆ ಆತನಿಂದ ರೂ 80,೦00 ಮೌಲ್ಯದ 1 ಕೆ.ಜಿ 788 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಗುಣಪಾಲ ಜೆ ಹಾಗೂ ಸಿಬ್ಬಂದಿಗಳಾದ ದೇವರಾಜ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೆನ್, ಸುರೇಶ ಹಾಗೂ ದಿವ್ಯಾಪ್ರಕಾಶ್ ಇವರನ್ನು ಒಳಗೊಂಡ ತಂಡ ಭಾಗಿಯಾಗಿತ್ತು.
- ಮಂಗಳೂರಿನಿಂದ ಶಂಶೀರ್ ಬುಡೋಳಿ



