ಬೆಳಗಾವಿ : ಬಾಕಿ ಉಳಿದಿರುವ ಮೂರು ತಿಂಗಳ (ಜನವರಿ, ಫೆಬ್ರವರಿ, ಮಾರ್ಚ್) ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಮತ್ತೊಂದು ತಿಂಗಳ ಹಣವನ್ನು ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸುಮ್ಮನೆ ಕೂರುವುದಿಲ್ಲ :
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಅತಿರೇಖವಾಗಿ ವರ್ತಿಸಿದರು. ಇಂತಹ ಘಟನೆಗಳು ಮರುಕಳಿಸಿದರೆ, ನಮ್ಮ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ನಮ್ಮ ಕಾರ್ಯಕರ್ತರಿಗೂ ರೋಷಾವೇಷ, ಪಕ್ಷದ ಬಗ್ಗೆ ಅಭಿಮಾನ, ಕಾಳಜಿ ಇದೆ ಎಂದು ಹೇಳಿದರು.