ಟೆಹರಾನ್: ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸಾದ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇರಾನ್ ಸರ್ಕಾರ ಮತ್ತೆ ಮೂವರು ಪ್ರಜೆಗಳನ್ನು ಗಲ್ಲಿಗೇರಿಸಿ ಶಿಕ್ಷೆ ವಿಧಿಸಿದೆ. ಈ ಘಟನೆಯು ಇಂಟರ್ನ್ಯಾಷನಲ್ ರಾಜಕೀಯ ಮತ್ತು ಮಾನವ ಹಕ್ಕುಗಳ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.
ಇರಾನ್ನ ಉರ್ಮಿಯಾ ಜೈಲಿನಲ್ಲಿ ಇಂದು ಬೆಳಿಗ್ಗೆ ಈ ಮೂವರು ಶಂಕಿತರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್ ನ್ಯಾಯಾಂಗ ಇಲಾಖೆನೊಂದಿಗೆ ನಿಕಟ ಸಂಬಂಧ ಹೊಂದಿರುವ ಮಿಝಾನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಗಲ್ಲಿಗೇರಿಸಲಾದ ವ್ಯಕ್ತಿಗಳ ಹೆಸರುಗಳು ಅಥವಾ ಹೆಚ್ಚಿನ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಈ ಮೂವರು ವ್ಯಕ್ತಿಗಳು ಇರಾನ್ನ ಗಡಿಭಾಗದಲ್ಲಿ ಇಸ್ರೇಲ್ ಪರ ಮಾಹಿತಿ ಸಂಗ್ರಹಿಸಿ ಪಾಸುಗೊಳಿಸುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿತರಾಗಿದ್ದರು. ಅವರಿಗೆ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ನೊಂದಿಗೆ ನೇರ ಸಂಪರ್ಕವಿತ್ತು ಎಂಬ ಪ್ರಾಥಮಿಕ ಸಾಕ್ಷಾಧಾರಗಳ ಮೇರೆಗೆ ತನಿಖೆ ನಡೆಸಿ, ಗಂಭೀರ ಆರೋಪಗಳ ಬಳಿಕ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಜೂನ್ 13ರಂದು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿತ್ತು. ಆ ಬಳಿಕ ಇಸ್ರೇಲ್ಗಾಗಿ ಬೇಹುಗಾರಿಕೆ ನಡೆಸಿದ ಮತ್ತು ಗುಪ್ತಚರ ಸಂಸ್ಥೆ ಮೊಸಾದ್ ಜೊತೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಮಜೀದ್ ಮೊಸೇಬಿ ಸೇರಿದಂತೆ ಮೂವರನ್ನು ಇರಾನ್ ಗಲ್ಲಿಗೇರಿಸಿತ್ತು. ಇದೀಗ ಮತ್ತೆ ಮೂವರನ್ನು ಇರಾನ್ ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ.