ಗದಗ: ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರ ಸಾವಿಗೀಡಾಗಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ.
ಸೂರಣಗಿ ಗ್ರಾಮದ ಹನುಮಂತ ಮಜ್ಜುರಪ್ಪ ಹರಿಜನ(21), ಮುರಳಿ ನೀಲಪ್ಪ ನಡವಿನಮನಿ(20), ನವೀನ ನೀಲಪ್ಪ ಗಾಜಿ(19) ಮೃತಪಟ್ಟವರು.
ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಲಕ್ಷ್ಮೇಶ್ವರ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ರಾಕಿಂಗ್ ಸ್ಟಾರ್ ಜನ್ಮದಿನವನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದ ಸೂರಣಗಿ ಗ್ರಾಮದ 10ಕ್ಕೂ ಯುವಕರು 25 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಕಟೌಟ್ ವಿದ್ಯುತ್ ತಂತಿ ತಾಗಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.