ಮೈಸೂರು: ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಬಳಿ ಐಪಿಎಲ್ ಹಾಗೂ ಇತರ ಆನ್‌ಲೈನ್ ಬೆಟ್ಟಿಂಗ್‌ಗೆ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಜೋಶಿ ಆಂಥೋನಿ, ಜೋಬಿ ಆಂಥೋನಿ, ಶರ್ಮಿಳಾ ಮೃತಪಟ್ಟವರು.
ಜೋಬಿ ಆಂಥೋನಿ ಹಾಗೂ ಜೋಷಿ ಆಂಥೋನಿ ಸಹೋದರರಾಗಿದ್ದು, ಜೋಶಿ ಆಂಥೋನಿ ತನ್ನ ತಮ್ಮನಾದ ಜೋಬಿ ಆಂಥೋನಿ ಮತ್ತು ನಾದಿನಿ ಶರ್ಮಿಳಾ ಮೇಲೆ ಮೋಸದ ಆರೋಪ ಹೊರಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹೋದರ ಜೋಬಿ, ಆತನ ಪತ್ನಿ ಶರ್ಮಿಳಾ ನನ್ನ ಸಹೋದರಿ ಮೂಲಕ ಊರು ತುಂಬ ಸಾಲ ಪಡೆದು ಮೋಸ ಮಾಡಿದ್ದಾರೆ. ನನ್ನ ಸಹೋದರಿಗೆ ಗಂಡ ಇಲ್ಲ, ಅವರು ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣ, ಅವರಿಗೆ ಶಿಕ್ಷೆ ಕೊಡಿಸಿ ಎಂದು ವೀಡಿಯೊದಲ್ಲಿ ಹೇಳಿ ಜೋಶಿ ಆಂಥೋನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೋಶಿ ಆಂಥೋನಿ ಸಾವಿನ ವಿಚಾರ ತಿಳಿದು ತಮ್ಮ ಜೋಬಿ ಆಂಥೋನಿ ಹಾಗೂ ಪತ್ನಿ ಶರ್ಮಿಳಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್ಗಾಗಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಪ್ರತಿ ನಿತ್ಯ ಮನೆಯ ಬಳಿ ಬಂದು ದುಡ್ಡು ಕೇಳುತ್ತಿದ್ದರು. ಇದರಿಂದ ಮನನೊಂದ ಜೋಷಿ ಆಂಥೋನಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಜೋಬಿ ಹಾಗೂ ಶರ್ಮಿಳಾ ವಿಜಯನಗರದ ಕ್ರೀಡಾ ಮೈದಾನದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.