ಚಾಮರಾಜನಗರ: ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪುಣಜನೂರು ವಲಯದ ಪುಣಜನೂರಿನಿಂದ ಬೇಡಗುಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಡರಾತ್ರಿ ಮೂರು ಹುಲಿ ಮರಿಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಅದರ ತಾಯಿ ಬಳಿಗೆ ಸೇರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸಿದ್ದಾರೆ.
ಅರಣ್ಯ ಸಿಬ್ಬಂದಿ ರಾತ್ರಿಗಸ್ತಿನಲ್ಲಿ ಓಡಾಡುತ್ತಿರುವಾಗ ಬಜೇಬಾವಿ ಅರಣ್ಯ ಪ್ರದೇಶದಲ್ಲಿ ಮೊದಲಿಗೆ ಎರಡು ಹುಲಿ ಮರಿಗಳು ಕಾಣಿಸಿಕೊಂಡಿವೆ. ನಂತರ ತಾಯಿ ಹುಲಿಯನ್ನು ಸುತ್ತಲೂ ಪರಿಶೀಲಿಸಿದಾಗ ಕಾಣದೇ ಹೋಗಿದ್ದು, ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ತಾಯಿ ಹುಲಿಯನ್ನು ಪತ್ತೆ ಮಾಡಲು ಕ್ಯಾಮರಾ ಟ್ರ್ಯಾಪ್ ಗಳನ್ನು ಅಳವಡಿಸಿ ರಾತ್ರಿಯಿಡಿ ಕಾವಲು ಮಾಡಿದ್ದಾರೆ. ಆದರೂ ತಾಯಿ ಹುಲಿ ಪತ್ತೆಯಾಗದೇ ಇದ್ದುದರಿಂದ ಮಂಗಳವಾರ ಕೂಂಬಿಂಗ್ ಮಾಡಿದ ಪರಿಣಾಮ ಮತ್ತೊಂದು ಹುಲಿ ಮರಿ ಪತ್ತೆಯಾಗಿದೆ. ಒಟ್ಟು ಮೂರು ಹುಲಿ ಮರಿಗಳು ಸಿಕ್ಕಿದ್ದು, ಇವುಗಳನ್ನು ತಾಯಿ ಹುಲಿ ಬಳಿಗೆ ಸೇರಿಸಲು ಎನ್ ಟಿ ಸಿ ಎ ಮಾರ್ಗಸೂಚಿಯಂತೆ ಬಿಆರ್ ಟಿ ಉಪ ಸಂರಕ್ಷಣಾಧಿಕಾರಿ ಶ್ರೀಪತಿ ಅವರ ಅಧ್ಯಕ್ಷತೆ ಸ್ಟ್ಯಾಂಡರ್ಡ್ ಟೆಕ್ನಿಕಲ್ ಗೈಡೆನ್ಸ್ ಅಂಡ್ ಮಾನಿಟರಿಂಗ್ ಕಮಿಟಿ ರಚಿಸಿ ಪಶು ವೈದ್ಯರ ಮೇಲುಸ್ತುವಾರಿಯಲ್ಲಿ ರಕ್ಷಣೆ ಮಾಡಿ ನಿಗಾ ವಹಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.