ರಾಷ್ಟ್ರೀಯ ಸ್ಟಾರ್ಟಪ್ ದಿನವಾದ ಜ. 16 ರಂದು ಮಂಗಳೂರಿನಲ್ಲಿ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ಟೈಕಾನ್ ಮಂಗಳೂರು 2026, ಡಾ. ಟಿ ಎಂ ಏ ಪೈ ಕನ್ವೆನ್ನನ್ ಸೆಂಟರ್ ನಲ್ಲಿ ಜರುಗಲಿದೆ ಎಂದು ಟೈ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ರೋಹಿತ್ ಭಟ್ ತಿಳಿಸಿದ್ದಾರೆ.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಪ್ರತಿನಿಧಿಗಳು,
50ಕ್ಕೂ ಅಧಿಕ ಹೂಡಿಕೆದಾರರು , 40ಕ್ಕೂ ಅಧಿಕ ಆಹ್ವಾನಿತ ಗಣ್ಯರು , 30ಕ್ಕೂ ಅಧಿಕ ಸ್ಟಾರ್ಟಪ್ ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದರು .
ಟೈ ಎಂದು ಪ್ರಖ್ಯಾತವಾಗಿರುವ ಅಂತಾರಾಷ್ಟ್ರೀಯ ಉದ್ಯಮ ಉತ್ತೇಜನ ಸಂಸ್ಥೆ ದಿ ಇಂಡಸ್ ಎಂಟಪ್ರ್ರನರ್ಸ್ ಇದರ ಮಂಗಳೂರು ಚಾಪ್ಟರ್, ಟೈಕಾನ್ ಮಂಗಳೂರು 2026ನ್ನು ಆಯೋಜಿಸುತ್ತಿದ್ದು ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (KDEM) ಹಾಗೂ ಸಿಲಿಕಾನ್ ಬೀಚ್ ಪ್ರೋಗ್ರಾಮ್ ಇದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು .
ಕರಾವಳಿ ಕರ್ನಾಟಕವು ಸೃಜನಶೀಲ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಜಗತ್ತಿಗೆ ತೋರಿಸುವ ಕಾರ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಇದು ಹೊಂದಿದೆ ಎಂದರು .
ಕಾರ್ಯಕ್ರಮದಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ – ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ , ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ , ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಎಸ್. ಕೃಷ್ಣನ್ , ಕರ್ನಾಟಕ ಸರಕಾರದ ಮಾಹಿತಿ – ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಮಂಜುಳಾ ಮುಖ್ಯ ಗಣ್ಯರಾಗಿ ಭಾಗವಹಿಸಲಿರುವರು ಎಂದರು .
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಆಕ್ಸೆಲ್ ಇಂಡಿಯಾ ಪಾಲುದಾರ ಪದ್ಮಶ್ರೀ ಪ್ರಶಾಂತ್ ಪ್ರಕಾಶ್, ಟೈಇ ಜಾಗತಿಕ ಅಧ್ಯಕ್ಷ ಮುರಳಿ ಬುಕ್ಕಾಪಟ್ಟಣಂ, ತ್ರೀ ವನ್ ಫೋರ್ ಕ್ಯಾಪಿಟಲ್ ಅಧ್ಯಕ್ಷ ಮೋಹನ್ ದಾಸ್ ಪೈ, ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ನಟ-ಉದ್ಯಮಿ ಸುನೀಲ್ ಶೆಟ್ಟಿ, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮತ್ತು ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಸಂಪನ್ಮೂಲ ವ್ಯಕ್ತಿಗಳಾಗಿ ಸೇರಿಕೊಳ್ಳಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಟೈಕಾನ್ ಮಂಗಳೂರು 2026 ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ರಾವ್ ಆರೂರ್ , ಯುನಿಫೈ ಸಿ ಎಕ್ಸ್ ನ ಚೀಫ್ ಪೀಪಲ್ ಸರ್ವೀಸಸ್ ಆಫೀಸರ್ ಶ್ಯಾಮ್ ಪ್ರಸಾದ್ ಹೆಬ್ಬಾರ್, ಕರುಣಾ ಇಂಫ್ರಾ ನಿರ್ದೇಶಕ ಸುದೇಶ್ ಕರುಣಾಕರನ್, ಯುನಿಕೋರ್ಟ್ ಕೋ ಫೌಂಡರ್ ಆ್ಯಂಡ್ ಸಿಇಒ ಪ್ರಶಾಂತ್ ಶೆಣೈ ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



