ಮೈಸೂರು: ಜಿಲ್ಲೆಯಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರಿದಿದೆ. ನಂಜನಗೂಡು ತಾಲೂಕಿನ ಮಹದೇವ ನಗರದ ಹೊರವಲಯದಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿದೆ. ದನ ಮೇಯಿಸುತ್ತಿದ್ದ ರೈತ ವೀರಭದ್ರ ಭೋವಿ (೭೦) ಎಂಬುವವರ ಮೇಲೆ ಹುಲಿ ದಾಳಿ ಮಾಡಿದ್ದು ಗಾಯಾಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗ್ರಾಮದ ಮತ್ತಿಮರದ ಜೇನುಕಟ್ಟೆಯ ಬಳಿ ವೀರಭದ್ರ ಅವರು ದನ ಮೇಯಿಸುತ್ತಿದ್ದಾಗ ಘಟನೆ ನಡೆದಿದೆ.
ವೀರಭದ್ರ ಅವರು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಹದೇವ ನಗರ ಗ್ರಾಮದ ಮತ್ತಿ ಮರದ ಜೇನುಕಟ್ಟೆಯ ಬಳಿ ದನ ಮೇಯಿಸುತ್ತಿದ್ದಾಗ ಹಸು ಹಾಗೂ ಕರುವಿನ ಮೇಲೆ ಹುಲಿ ದಾಳಿ ನಡೆಸಿತ್ತು. ಈ ವೇಳೆ ಹಸುವನ್ನು ರಕ್ಷಿಸಲು ಹೋಗಿದ್ದ ವೀರಭದ್ರ ಮೇಲೂ ಹುಲಿ ದಾಳಿ ಮಾಡಿದೆ. ಸದ್ಯ ರೈತನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹಡಿಯಾಲ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಮಹಾದೇವನಗರ ರೈತರು ಆಕ್ರೋಶ ಹೊರಹಾಕಿದ್ದಾರೆ. ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.