ಗುಂಡ್ಲುಪೇಟೆ: ಕಾಡಿನ ಸಂರಕ್ಷಣೆಯಲ್ಲಿ ಹುಲಿಗಳು ಅತಿ ಪ್ರಮುಖ ಪ್ರಾಣಿಯಾಗಿದ್ದು, ಪರಿಸರ ನಾಶದಿಂದ ಅವು ಕಷ್ಟಕರ ಜೀವನ ನಡೆಸುತ್ತಿವೆ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಶ್ವ ಹುಲಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ರಾಯಲ್ ಬೆಂಗಾಲ್, ಸೈಬೀರಿಯಾ, ಸುಮಾತ್ರ, ಕ್ಯಾಸ್ಪಿಯನ್, ಇಂಡೋ ಚೈನಾ ಹಾಗೂ ಸೌತ್ ಚೈನಾ ಎಂಬ 6 ಪ್ರಬೇಧದ ಹುಲಿಗಳಿವೆ ಎಂದು ತಿಳಿಸಿದರು.
ನಾಜೂಕಿನ ಪ್ರಾಣಿಯಾದ ಹುಲಿಗಳು ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿವೆ. 11 ಚದರ ಕಿ.ಮೀಗೆ ಒಂದು ಹುಲಿವಾಸವಿದ್ದು, ಅವುಗಳು ಏಕಾಂಗಿಯಾಗಿ ತಮ್ಮ ಸರಹದ್ದು ರಕ್ಷಿಸಿ ಮರಿಗಳ ರಕ್ಷಣೆಯಲ್ಲಿ ಜಾಗರೂಕತೆ ವಹಿಸುತ್ತವೆ ಎಂದು ತಿಳಿಸಿ, ಮಾನವ ಪ್ರಾಣಿ ಸಂಘರ್ಷದಲ್ಲಿ ಮಹಾರಾಷ್ಟ್ರದ ವಿದರ್ಭದಲ್ಲಿ ಅವನಿ ಎಂಬ ಹುಲಿಯ ಕೊಲ್ಲುವಾಗ ನಡೆದ ವಿರೋಧಗಳ ರಸವತ್ತಾಗಿ ವಿವರಿಸಿ ತಾವೇ ಸೆರೆಹಿಡಿದ ಹುಲಿಚಿತ್ರಗಳ ಪ್ರದರ್ಶಿಸಿದರು.
ಶಿಕ್ಷಕರಾದ ನಂಜುಂಡಸ್ವಾಮಿ ಮಾತನಾಡಿ, ಹುಲಿಗಳು ಕರ್ನಾಟಕದಲ್ಲಿ ಅದರಲ್ಲಿಯೂ ಬಂಡೀಪುರದಲ್ಲಿ ಹೆಚ್ಚಿರುವುದು ನಮಗೆ ಹೆಮ್ಮೆಯ ವಿಷಯ. ಆದ್ದರಿಂದ ಮಕ್ಕಳು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಸಿಬ್ಬಂದಿಗಳು ಭಾಗವಹಿಸಿದ್ದರು.