ಬೆಂಗಳೂರು: ಬಿಜೆಪಿಯಲ್ಲಿ ಯೋಗ ನಡೆಯುವುದಿಲ್ಲ. ಯೋಗ್ಯತೆಗೆ ಅವಕಾಶ ಕೊಡುತ್ತಾರೆ ಎಂದು ರಾಜ್ಯ ವಿಧಾನಪರಿಷತ್ತಿನ ನೂತನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಹೊಸ ಹುದ್ದೆಗೆ ನೇಮಕಗೊಂಡ ಬಳಿಕ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಇಂಥ ಸ್ಥಾನಕ್ಕೆ ಬರಲು ಕಾಂಗ್ರೆಸ್ಸಿನಲ್ಲಿ ಯೋಗ ಮತ್ತು ಕೆಲವೊಂದು ವಿದ್ಯೆಗಳೂ ಬೇಕು ಎಂದು ತಿಳಿಸಿದರು.
ಪಕ್ಷ ನಿಷ್ಠೆ, ಬದ್ಧತೆಯನ್ನು ಗುರುತಿಸಿ ನನಗೆ ಈ ಮಹತ್ವದ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.ತಳ ಸಮುದಾಯಗಳನ್ನು ಸಂಘಟಿಸಿ ಪಕ್ಷ ಸಂಘಟನೆಗೆ ಶ್ರಮಿಸುವೆ ಎಂದು ಅವರು ತಿಳಿಸಿದರು. ಸರಕಾರ ಮಾಡುವ ತೊಂದರೆ, ನ್ಯೂನತೆಗಳನ್ನು ಸಮಾಜಕ್ಕೆ ತಿಳಿಸುವೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮಾಡಿದ ಅನ್ಯಾಯದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಪ್ರಕಟಿಸಿದರು. ನಾವು ನೂರು ಹೋರಾಟ ಮಾಡಿದರೆ, ಅವರು ಹುಡುಕಿ ಒಂದಾದರೂ ಹೋರಾಟ ಮಾಡಬೇಕಲ್ಲವೇ ಅದಕ್ಕಾಗಿಯೇ ಇವತ್ತು ಇ.ಡಿ. ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದರಲ್ಲಿ ಹುರುಳಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟರು.