ನವದೆಹಲಿ: ಟಿಂಡರ್ ಸೇರಿದಂತೆ ಡೇಟಿಂಗ್ ಆ್ಯಪ್ ಬಳಸುವವರಿಗೆ ಇದು ಎಚ್ಚರಿಕೆಯ ಕರೆ ಗಂಟೆ. ಪ್ರಿಯಾ ಸೇತ್ ಮತ್ತು ದುಷ್ಯಂತ್ ಶರ್ಮ ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ಹತ್ತಿರಾಗಿದ್ದಾರೆ. ಇಬ್ಬರ ಅಭಿರುಚಿಗಳೂ ಹೊಂದಿಕೊಂಡಿವೆ. ಇಬ್ಬರೂ ಒಂದು ನಿರ್ದಿಷ್ಟ ಜಾಗದಲ್ಲಿ ಒಟ್ಟಾಗಿದ್ದಾರೆ. ಪ್ರಿಯಾ ತನ್ನ ಆತ್ಮೀಯರಾದ ದಿಕ್ಷಾಂತ್ ಕಮ್ರಾ, ಲಕ್ಷ್ಯ ವಾಲಿಯ ಜೊತೆಗೂಡಿ ದುಷ್ಯಂತ್‌ನನ್ನು ಕೊಲೆ ಮಾಡಿದ್ದಾಳೆ. ಈ ಪ್ರಕರಣ ನಡೆದಿದ್ದು 2018ರ ಮೇನಲ್ಲಿ. ಇಂಥ ಕೃತ್ಯವೆಸಗಿದ ಮೂವರಿಗೂ ಜೈಪುರ ನ್ಯಾಯಾಲಯ ಆಜೀವ ಜೈಲುಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ?
ಜಾಲ ತಾಣಗಳಲ್ಲಿ ಸುಳ್ಳು ಹೇಳಿ ಸ್ತ್ರೀಪುರುಷರು ಪರಸ್ಪರ ವಂಚಿಸುವ ಮಾದರಿಯಲ್ಲೇ ಇದೂ ಇದೆ. ಟಿಂಡರ್‌ನಲ್ಲಿ ಪರಿಚಯವಾದ ಮೊದಲ ದಿನದಿಂದಲೇ ಇಬ್ಬರೂ ಪರಸ್ಪರ ಸುಳ್ಳು ಹೇಳಿದ್ದಾರೆ. ದುಷ್ಯಂತ್ ತಾನು ನವದೆಹಲಿಯ ಶ್ರೀಮಂತ ಉದ್ಯಮಿ, ಅವಿವಾಹಿತ, ಹೆಸರು ವಿವನ್ ಕೊಹ್ಲಿ ಎಂದಿದ್ದಾನೆ. ಆದರೆ 28 ವರ್ಷ ಆತ ಹೇಳಿದ್ದೆಲ್ಲವೂ ಸುಳ್ಳು! ಇನ್ನೊಂದು ಕಡೆ ಪ್ರಿಯಾ, ದುಷ್ಯಂತ್‌ನಿಂದ 10 ಲಕ್ಷ ರೂ. ವಸೂಲಿ ಮಾಡಿ, ಕೊಂದುಬಿಡುವ ಉದ್ದೇಶ ಹೊಂದಿದ್ದಳು! ಇದಕ್ಕೆ ಕಾರಣವೂ ಇದೆ. ಆಕೆ ತನ್ನ ಪ್ರಿಯಕರ ದಿಕ್ಷಾಂತ್‌ನೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದಳು. ಆತ 21 ಲಕ್ಷ ರೂ. ಸಾಲ ಮಾಡಿ, ಹೀಗೆ ಹಣಕೊಡುವ ವ್ಯಕ್ತಿಯೊಬ್ಬನನ್ನು ಹುಡುಕುತ್ತಿದ್ದ. ದುಷ್ಯಂತ್ ಸಿಕ್ಕೊಡನೆ ಹಣ ವಸೂಲಿ ಮಾಡಿ ಕೊಲ್ಲುವ ಯೋಜನೆ ಹಾಕಿದ್ದರು. ಆದರೆ ದುಷ್ಯಂತ್‌ನನ್ನು ನೋಡಿದಾಗ ಆತನ ಬಳಿ ಅಷ್ಟು ಹಣವೇ ಇಲ್ಲ ಎಂದು ಗೊತ್ತಾಗಿತ್ತು. ಆದರೆ, ಆ ಹೊತ್ತಿಗೆ ಕಾಲ ಮಿಂಚಿತ್ತು.