ಬೆಂಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಮಹಿಳೆಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹುಳಿಮಾವು ಸಮೀಪದ ಅಕ್ಷಯ ನಗರದ ನಿವಾಸಿ ಅನುಷಾ(27) ಮೃತ ಮಹಿಳೆ. ಸೆ.5ರಂದು ಮನೆಯ ಬಾತ್‌ರೂಮ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸೆ.6ರಂದು ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಆಕೆಯ ತಾಯಿ ರೇಣುಕಾ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಅನುಷಾ ಅವರ ಪತಿ ಟೆಕ್ಕಿ ಶ್ರೀಹರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಶ್ರೀಹರಿಯ ಅನೈತಿಕ ಸಂಬಂಧವೇ ದುರ್ಘಟನೆಗೆ ಕಾರಣ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ಶ್ರೀಹರಿ ಮತ್ತು ಅನುಷಾ 5 ವರ್ಷಗಳ ಹಿಂದೆ ಮದುವೆಯಾಗಿ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಶ್ರೀಹರಿ ಮಾರತ್‌ಹಳ್ಳಿಯಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅನುಷಾ ಮನೆಯಲ್ಲೇ ಇರುತ್ತಿದ್ದರು. ಬೇರೊಬ್ಬ ಮಹಿಳೆ ಜತೆ ಸಂಬಂಧ ಹೊಂದಿದ್ದ ಶ್ರೀಹರಿ, ಮಹಿಳೆಯರ ಜತೆ ವಿಡಿಯೋ ಕಾಲ್, ಅಸಭ್ಯ ಸಂಭಾಷಣೆ ಮಾಡುತ್ತಿದ್ದ. ಈ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಪತ್ನಿ ಮೇಲೆಯೇ ಹಲ್ಲೆ ನಡೆಸುತ್ತಿದ್ದ ಎಂದು ಮೃತಳ ಪೋಷಕರು ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪತಿಯ ದುರ್ವರ್ತನೆಯನ್ನು ಅನುಷಾ ತನ್ನ ಪೋಷಕರಿಗೆ ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಆದರೆ, ಅನುಷಾ, ಪತಿಯೊಂದಿಗೆ ಮತ್ತೊಮ್ಮೆ ಮಾತನಾಡಿ ಸರಿಪಡಿಸಿಕೊಳ್ಳುತ್ತೇನೆ ಎಂದು ಪೋಷಕರಿಗೆ ಹೇಳಿದ್ದರು. ಅಷ್ಟರಲ್ಲಿ ಸಹೋದ್ಯೋಗಿ ಜತೆ ಅನುಚಿತ ವರ್ತನೆ ಸಂಬಂಧ ಶ್ರೀಹರಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.
ಕೆಲಸ ಕಳೆದುಕೊಂಡಿದ್ದ ಶ್ರೀಹರಿ ಮೂರು ತಿಂಗಳಿಂದ ಮನೆಯಲ್ಲೇ ಇರುತ್ತಿದ್ದ. ಸೆ.5ರಂದು ಪತ್ನಿ ಜತೆ ಜಗಳವಾಡುತ್ತಾ ನಾನು ಇನ್ನೊಂದು ಮದುವೆಯಾದರೆ ತಪ್ಪೇನು? ದರ್ಶನ್ ರೀತಿ ನಾನು ಇನ್ನೊಂದು ಸಂಬಂಧ ಇಟ್ಟುಕೊಂಡರೆ ತಪ್ಪೇನು? ಎಂದು ಪತ್ನಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದರಿಂದ ಬೇಸತ್ತ ಅನುಷಾ ಮನೆಯ ಬಾತ್‌ರೂಮ್‌ನಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಪತ್ನಿ ಬೆಂಕಿ ಹಚ್ಚಿಕೊಂಡಿದ್ದರೂ ಪತಿ ಶ್ರೀಹರಿ ರಕ್ಷಣೆಗೆ ಹೋಗಿಲ್ಲ. ಆಗ ಆಕೆಯ ಜೋರು ಶಬ್ದ ಕೇಳಿ ನಾನೇ ಪಕ್ಕದ ಮನೆಯರ ರಕ್ಷಣೆ ಕೋರಿ ಆಸ್ಪತ್ರೆಗೆ ಕೆರದೊಯ್ದೆ ಎಂದು ಅನುಷಾ ತಾಯಿ ರೇಣುಕಾ ಅವರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಅನುಷಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೆ.6ರಂದು ತಡರಾತ್ರಿ ಅನುಷಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.