ನವದೆಹಲಿ: ವೈಕುಂಠ ಏಕಾದಶಿಗೂ ಮುನ್ನ ತಿರುಪತಿಯಲ್ಲಿ ಭೀಕರ ದುರಂತ ಸಂಭವಿಸಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ 7 ಮಂದಿ ಸಾವಿಗೀಡಾಗಿದ್ದು, ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಿಂದ ನೋವಾಗಿದೆ. ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಹೇಳಿದ್ದಾರೆ.
ಗುರುವಾರ ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ಯೋಜಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಹೊರಗೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕೆಳಗೆ ಬಿದ್ದ ನಾಲ್ವರು ಮಹಿಳೆಯರು ಕಾಲ್ತುಳಿತದಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಘಟನೆಯಲ್ಲಿ ಗಾಯಗೊಂಡ 40 ಮಂದಿಗೆ ತಿರುಪತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಲ್ತುಳಿತದಲ್ಲಿ ಸಿಲುಕಿದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ. ಆದರೆ, ಅದರಲ್ಲಿ ಚಿಕಿತ್ಸೆ ಫಲಿಸದೆ ಐವರು ಮಹಿಳೆಯರು ಮತ್ತು ಓರ್ವ ಪುರುಷ ಸಾವಿಗೀಡಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 10ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ, ಜ.10, 11, 12ರಂದು ವೈಕುಂಠ ದ್ವಾರ ದರ್ಶನಕ್ಕೆ ಟಿಟಿಡಿ ವ್ಯವಸ್ಥೆ ಮಾಡಿದೆ. ಮೂರು ದಿನಗಳಿಗಾಗಿ ಒಟ್ಟು 1.20 ಲಕ್ಷ ಟೋಕನ್‌ಗಳನ್ನು ಗುರುವಾರ ವಿತರಿಸಲು ಟಿಟಿಡಿ ಯೋಜಿಸಿತ್ತು.