
ಪಿರಿಯಾಪಟ್ಟಣ: ರಾಜ್ಯದಲ್ಲಿಯೇ ಅತಿ ಹೆಚ್ಚು ವರ್ಜಿನೀಯ ತಂಬಾಕು ಉತ್ಪಾದನೆ ಮಾಡುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಿರಿಯಾಪಟ್ಟಣ ತಾಲೂಕಿನಾದ್ಯಂತ ಬೆಳೆಗಾರರು, ತಂಬಾಕು ಹದ (ಕೊಯ್ಲು) ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ರಾಜ್ಯದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ವರ್ಜೀನಿಯಾ ತಂಬಾಕಿಗೆ ವಿಶ್ವಾದ್ಯಂತ ಬೇಡಿಕೆ ಇದ್ದು, ರಾಜ್ಯದಲ್ಲಿ ಬೆಳೆಯುವ ಒಟ್ಟು ತಂಬಾಕಿನಲ್ಲಿ ಶೇ. ೭೦ ರಷ್ಟು ತಂಬಾಕನ್ನು ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ಕೆ.ಆರ್. ನಗರ ಹಾಗೂ ಅರಕಲಗೂಡಿನಲ್ಲಿ ಬೆಳೆಯಲಾಗುತ್ತದೆ.
ಭರಣಿ ಮಳೆಗೆ ನಾಟಿ ಕಾರ್ಯ: ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಸಸಿ ಮಡಿ ಮಾಡಿದ ತಂಬಾಕು ಗಿಡಗಳನ್ನು ಮೇ ತಿಂಗಳಲ್ಲಿ ಭರಣಿ ಮಳೆಗೆ ನಾಟಿ ಮಾಡಿದರೆ ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ಏಪ್ರಿಲ್ ತಿಂಗಳಲ್ಲಿ ಜಮೀನಿಗೆ ತಂಬಾಕನ್ನು ನಾಟಿ ಮಾಡಿದ್ದು, ಬೆಳೆಗಾರರು ಈಗಾಗಲೇ ತಂಬಾಕು ಸೊಪ್ಪನ್ನು ಹದ ಮಾಡುವ ಕೆಲಸದಲ್ಲಿ ನಿರತರಾಗಿರುವುದು ತಾಲೂಕಿನಾದ್ಯಂತ ಕಂಡು ಬರುತ್ತಿದೆ.
ಈ ಬಾರಿ ನಿರೀಕ್ಷೀತ ಪ್ರಮಾಣದಲ್ಲಿ ಮಳೆ ಬೀಳದಿದ್ದರೂ ಕೆಲವರು ಪಂಪ್ ಸಟ್ ಮೂಲಕ ನೀರು ಆಯಿಸಿ ತಂಬಾಕು ಬೆಳೆದಿದ್ದರೆ, ಬಹುತೇಕ ಮಳೆಯಾಶ್ರಯದಲ್ಲಿಯೇ ತಂಬಾಕು ಬೆಳೆದಿದ್ದಾರೆ. ಈ ಬಾರಿ ವರುಣನ ಅವಕೃಪೆಯ ನಡುವೆಯೂ ರೈತ ಸಾಕಷ್ಟು ಪ್ರಮಾಣದಲ್ಲಿ ತಂಬಾಕು ಬೆಳೆದಿದ್ದಾನೆ. ಮೊದಲಿಗೆ ಜಮೀನಿನಲ್ಲಿ ಬೆಳೆದಿದ್ದ ಹೊಗೆಸೊಪ್ಪಿನ ಎಲೆಗಳನ್ನು ಕುಯ್ದು ತಂದು ನಂತರ ಅವುಗಳನ್ನು ಬಿದಿರು ಕಡ್ಡಿ, ನೀಲಗಿರಿ ಅಥವಾ ಅಡಕೆ ದಬ್ಬೆಗೆ ದಾರಕಟ್ಟಿ ಹೆಣೆದು ಅವುಗಳನ್ನು ಬ್ಯಾರೆನ್‌ಗೆ ನೇತು ಹಾಕಿದ ಸೊಪ್ಪಿಗೆ ಸುಮಾರು ೫ ದಿನಗಳ ಕಾಲ ಬೆಂಕಿಯ ಶಾಖವನ್ನು ನೀಡಲಾಗುತ್ತದೆ. ಬಳಿಕ ಅವುಗಳನ್ನು ದಾರದಿಂದ ಹೊರತೆಗೆದು ಗಾಳಿಬೆಳಕು ಬೀಳದ ರೀತಿಯಲ್ಲಿ ಸಂಗ್ರಹಣೆ ಮಾಡಲಾಗುತ್ತದೆ.
ಅಗ್ನಿ ಅವಘಡ ಭಯ: ತಂಬಾಕು ಬೆಳೆಗಾರರು ತಂಬಾಕನ್ನು ಹದ ಮಾಡುವ ಸಂದರ್ಭದಲ್ಲಿ ಬ್ಯಾರನ್ನಿನಲ್ಲಿ ಶೇಖರಿಸಿಟ್ಟಿದ್ದ ಕಡ್ಡಿಗಳು ಜಾರುವುದರಿಂದ ಮತ್ತು ಎಲೆಗಳು ಉದುರುವುದರಿಂದ ಕೆಲವು ಬಾರಿ ಪೈಪ್‌ಗ್ಳಿಗೆ ಬೆಂಕಿತಾಗಿ ಅಗ್ನಿ ಅವಘಡಗಳು ಸಂಭವಿಸಿರುವ ಉದಾಹಣೆಗಳೂ ಕಣ್ಣು ಮುಂದಿದ್ದು, ಇಂತಹ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಕಾಯುತ್ತಾರೆ.
ತಂಬಾಕು ಬೆಳೆಯಲು ಅಧಿಕ ಖರ್ಚು: ತಂಬಾಕು ಬೆಳೆಯುವ ರೈತರಲ್ಲಿ ಕೆಲವರು ಸಿಂಗಲ್ ಮತ್ತು ಮತ್ತೆ ಕೆಲವರು ಡಬ್ಬಲ್ ಬ್ಯಾರನ್ ಲೈಸೆನ್ಸ್ ಹೊಂದಿರುತ್ತಾರೆ. ಸಿಂಗಲ್ ಬ್ಯಾರೆನ್ ಲೈಸೆನ್ಸ್ ಹೊಂದಿರುವ ರೈತರಿಗೆ ಒಂದು ಎಕರೆಯಲ್ಲಿ ತಂಬಾಕು ಬೆಳೆಯಲು ರಸಗೊಬ್ಬರಕ್ಕಾಗಿ ೪೫ ಸಾವಿರ ರೂ., ಕೂಲಿಗೆ ೩೦ ಸಾವಿರ ರೂ., ಸೌದೆಗೆ ೫೦ ಸಾವಿರ ರೂ. ಇನ್ನಿತರೆ ಕೆಲಸಗಳಿಗೆ ೫೦ ಸಾವಿರ ರೂ. ಹೀಗೆ ಒಟ್ಟು ಒಂದು ವರೆ ಲಕ್ಷಕ್ಕೂ ಅಧಿಕ ಹಣ ಖರ್ಚಾಗುತ್ತದೆ.
ಇಳುವರಿ: ಒಂದು ಎಕರೆಯಲ್ಲಿ ಉತ್ತಮ ಇಳುವರಿ ಬಂದರೆ ೭೦೦ ರಿಂದ ೮೦೦ ಕೆ.ಜಿ. ತಂಬಾಕು ಬೆಳೆಯಬಹುದು. ಸರಾಸರಿ ಒಂದು ಕೆ.ಜಿ. ತಂಬಾಕು ಬೆಳೆಯಲು ರೈತರಿಗೆ ೧೧೦ ರಿಂದ ೧೨೦ ರೂ. ಖರ್ಚು ತಗಲುತ್ತದೆ. ೨೦೨೨-೨೩ನೇ ಸಾಲಿನಲ್ಲಿ ಪಿರಿಯಾಪಟ್ಟಣ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ತಂಬಾಕಿಗೆ ೨೦೨ ರೂ.ಗಳು ಬೆಳೆಗಾರರಿಗೆ ಸಿಕ್ಕ ಅತ್ಯಧಿಕ ಮೊತ್ತವಾಗಿದ್ದು, ಈ ಬಾರಿ ಸರಾಸರಿ ೨೫೦ ರೂ.ಗೂ ಹೆಚ್ಚಿನ ಮೊತ್ತ ಸಿಕ್ಕಿದರೆ ಮಾತ್ರ ಪ್ರಸಕ್ತ ವರ್ಷ ತಂಬಾಕು ಬೆಳೆಗಾರರು ಚೇತರಿಕೊಂಡು, ಈಗಾಗಲೇ ಲಕ್ಷಾಂತರ ರೂ ಸಾಲ ಮಾಡಿ ಬೆಳೆ ಬೆಳೆದ ರೈತ ನೆಮ್ಮದಿಯಿಂದ ಬದುಕಲು ಸಾಧ್ಯ.
ಸೌದೆಗೆ ಬೇಡಿಕೆ: ತಂಬಾಕು ಹದಗೊಳಿಸಲು ಸಾಕಷ್ಟು ಸೌದೆ ಅತ್ಯಗತ್ಯವಿದ್ದು, ಈ ಸೌದೆಗೆ ಟನ್‌ಗೆ ೪,೫೦೦ ದಿಂದ ೫,೦೦೦ ರೂ.ಗೂ ಅಧಿಕವಾಗಿದೆ. ಈಗಾಗಲೇ ಪಿರಿಯಾಪಟ್ಟಣ ತಾಲೂಕು ಸೇರಿದಂತೆ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಕಾಫಿ, ನೀಲಗಿರಿ, ಹರ್ಕಿಲಸ್, ಹುಣಸೆ, ಹಲಸು, ಮಾವು ಸೇರಿದಂತೆ ವಿವಿಧ ಕಾಡು ಜಾತಿಯ ಸೌದೆಗಳನ್ನು ಪಟ್ಟಣಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಒಂದು ಎಕರೆಯಲ್ಲಿ ಬೆಳೆದ ತಂಬಾಕು ಹದ ಮಾಡಲು ಕನಿಷ್ಠ ೫೦ ಸಾವಿರ ರೂ.ನಷ್ಟು ಸೌದೆ ಬೇಕಾಗುತ್ತಿದೆ.
ಉತ್ತಮ ಬೆಲೆ ನಿರೀಕ್ಷೆ: ಈ ಬಾರಿ ತಂಬಾಕು ಬೆಳೆಗಾರರು ತಾಲೂಕಿನಾದ್ಯಂತ ಸುಮಾರು ೩೦ ಸಾವಿರ ಹೆಕ್ಟೇರ್ ಪ್ರದೇಶಗಳಿಂತಲೂ ಹೆಚ್ಚು ಪ್ರದೇಶದಲ್ಲಿ ತಂಬಾಕನ್ನು ಬೆಳೆದಿದ್ದು, ಉತ್ತಮ ದರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ನೆರೆಯ ಆಂಧ್ರ ಪ್ರದೇಶದಲ್ಲಿ ತಂಬಾಕು ಖರೀದಿ ಕೇಂದ್ರ ಪ್ರಾರಂಭವಾಗಿ ರೈತರು ಬೆಳೆದಿರುವ ತಂಬಾಕಿಗೆ ಪ್ರತಿ ಕೆ.ಜಿ.ಗೆ ೨೦೩ ರೂ. ನಿಗದಿ ಮಾಡಿ ರೈತರಿಂದ ಖರೀದಿಸಲಾಗುತ್ತಿದೆ. ರಾಜ್ಯದಲ್ಲಿಯೂ ಇದಕ್ಕಿಂತ ಹೆಚ್ಚಿನ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ರೈತರು ತಂಬಾಕು ಬೆಳೆ ಬೆಳೆಯುವುದಕ್ಕಾಗಿ ಬ್ಯಾಂಕುಗಳಿಂದ, ಖಾಸಗಿಯವರಿಂದ ಸಾಲ ಪಡೆದು ಹಾಗೂ ತಮ್ಮಲ್ಲಿದ್ದ ಒಡವೆಗಳನ್ನು ಗಿರವಿ ಇಟ್ಟು ಈಗಾಗಲೇ ಸಾಕಷ್ಟು ಹಣ ವ್ಯಯ ಮಾಡಿರುವ ಬೆಳೆಗಾರರು ತಂಬಾಕು ಖರೀದಿ ಮಾಡುವ ಕಂಪನಿಗಳು ನಿಗದಿ ಮಾಡುವ ಮೊತ್ತದ ಮೆಲೆ ತಮ್ಮ ಅಳಿವು ಉಳಿವಿನ ಪ್ರಶ್ನೆ ಇರುತ್ತದೆ ಎಂದು ಹೇಳುವುದನ್ನು ಅಲ್ಲಗಳಿಯುವಂತಿಲ್ಲ.
ತಂಬಾಕು ಕೆಲಸಕ್ಕೆ ಕೂಲಿ ದುಬಾರಿ: sssತಂಬಾಕು ಹದ ಮಾಡುವ ಕೆಲಸದಲ್ಲಿ ನಿರತರಾದ ಪುರುಷರಿಗೆ ದಿನ ಒಂದಕ್ಕೆ ೬೦೦ ರಿಂದ ೭೦೦ ರೂ. ಹಾಗೂ ಮಹಿಳೆಯರಿಗೆ ಹೊಗೆಸೊಪ್ಪು ಕೊಯ್ಲು ಮಾಡಿ ತಂದು ಅದಕ್ಕೆ ದಾರ ಹಾಕಿ ಕಟ್ಟಲು ಒಂದು ಕಡ್ಡಿಗೆ( ಸರಕ್ಕೆ) ೧೦ ರೂಪಾಯಿಗಳಂತೆ ನಿಗದಿಪಡಿಸಲಾಗಿದ್ದು, ಪ್ರತಿ ಮಹಿಳೆಯರು ದಿನಕ್ಕೆ ೬೦೦ ರಿಂದ ೭೦೦ ರೂ. ವರೆಗೆ ಕೂಲಿ ಪಡೆಯುತ್ತಾರೆ.
ಕೆಲವು ಭಾಗಗಳಲ್ಲಿ ಮಹಿಳಾ ಕಾರ್ಮಿಕರು ೬ ರಿಂದ ೭ ಜನರ ಗುಂಪು ಮಾಡಿಕೊಂಡು ಪ್ರತಿ ಬ್ಯಾರೆನ್ ಒಂದಕ್ಕೆ ಸೊಪ್ಪು ಕೊಯ್ಲು ಮಾಡಿ ಕಡ್ಡಿಗೆ ಧಾರ ಕಟ್ಟಲು ಸುಮಾರು ರೂ. ೬೦೦೦ ಕ್ಕೂ ಹೆಚ್ಚು ಹಣ ಪಡೆಯುತ್ತಿರುವುದು ಕಂಡುಬರುತ್ತದೆ. ಇದಲ್ಲದೇ ಈ ಕೆಲಸದಲ್ಲಿ ನಿತರರಾದವರಿಗೆ ಇದರೊಂದಿಗೆ ಕೂಲಿಯ ಜೊತೆಗೆ ಕಾಫೀ, ಟೀ, ಊಟ ತಿಂಡಿಯನ್ನು ನೀಡಬೇಕು. ಒಟ್ಟಾರೆ ಒಬ್ಬ ಕೂಲಿ ಆಳಿಗೆ ದಿನಕ್ಕೆ ಕನಿಷ್ಠ ೭೦೦ ಕ್ಕೂ ಹೆಚ್ಚು ಖರ್ಚು ಬರುತ್ತಿದೆ ಎಂದು ಬೆಳೆಗಾರರು ಹೇಳುತ್ತಾರೆ.
