ಮಂಡ್ಯ: ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಜರುಗಲಿದೆ. ಈ ವೈರಮುಡಿ ಉತ್ಸವದಲ್ಲಿ ಶ್ರೀದೇವಿ, ಭೂದೇವಿಯರೊಂದಿಗೆ ಚೆಲುವನಾರಾಯಣಸ್ವಾಮಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.
ಮಂಡ್ಯ ಜಿಲ್ಲಾಡಳಿತ ವತಿಯಿಂದ ನಡೆಯಲಿರುವ ವೈರಮುಡಿ ಉತ್ಸವಕ್ಕೆ ಬೆಳಗ್ಗೆ 8:30ಕ್ಕೆ ಚಾಲನೆ ಸಿಗಲಿದೆ. ಶ್ರೀದೇವಿ, ಭೂದೇವಿಯರ ಜೊತೆಗೆ ರತ್ನ ಖಚಿತ ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡಲಿರುವ ಗರುಢಾರೂಢನಾದ ಚೆಲುವನಾರಾಯಣಸ್ವಾಮಿಯನ್ನು ನೋಡಿದರೆ ಸಾಕ್ಷಾತ್ ಭಗವಂತನೇ ಧರೆಗಿಳಿದು ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡಿದಂತೆ ಭಾಸವಾಗುತ್ತದೆ.
ಇಂದು ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಹೊರರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಇಂದಿನ ವೈರಮುಡಿ ಉತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಜಿಲ್ಲಾ ಖಜಾನೆಯಿಂದ ಆಭರಣಗಳು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಗಿದೆ.
ಖಜಾನೆಯಿಂದ ಆಭರಣಗಳನ್ನು ಡಿಸಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ತಂದು ಹಸ್ತಾಂತರ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಹಸ್ತಾಂತರವಾಗಿರುವ ವೈರಮುಡಿ ಆಭರಣಗಳನ್ನು ಬಿಗಿ ಭದ್ರತೆಯೊಂದಿಗೆ ತೆಗೆದುಕೊಂಡು ಹೋಗಲಾಗಿದೆ.
ಮಂಡ್ಯ ನಗರದ ಪ್ರಮುಖ ಬೀದಿಯಲ್ಲಿ ಹಾದು ಹೋಗುವ ವೈರಮುಡಿ ಆಭರಣಗಳನ್ನು ಹೊತ್ತ ವಾಹನ ಬಳಿಕ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತೆರಳಲಿದೆ. ನಂತರ ಬಾಬುರಾಯನಕೊಪ್ಪಲಿಗೆ ತೆರಳಿ ಅಲ್ಲಿಂದ ಪಾಂಡವಪುರಕ್ಕೆ ತೆರಳಲಿದೆ. ಬಳಿಕ ಜಕ್ಕನಹಳ್ಳಿಗೆ ತೆರಳಿ ಅಲ್ಲಿಂದ ಮೇಲುಕೋಟೆಗೆ ತೆರಳಲಿದೆ. ಈ ವೇಳೆ ದಾರಿ ಮಧ್ಯದಲ್ಲಿ ಸಿಗುವ ಗ್ರಾಮಗಳಲ್ಲಿ ವೈರಮುಡಿಗೆ ಪೂಜೆಸಲ್ಲಿಸಲಾಗುತ್ತದೆ.