ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಮಕ್ಕಳೇ ಹೆಚ್ಚು ಗ್ರಾಹಕರಾಗಿದ್ದು, ಅವಶ್ಯಕ ವಸ್ತುಗಳನ್ನು ಆನ್‍ಲೈನ್ ಹಾಗೂ ಆಫ್‍ಲೈನ್‍ನಲ್ಲಿ ಖರೀದಿಸುತ್ತಿದ್ದಾರೆ. ಹೀಗಾಗಿ ಮಕ್ಕಳು, ಪೋಷಕರು ಗ್ರಾಹಕರ ಕಾಯ್ದೆಗಳ ಬಗ್ಗೆ ಅರಿವು ಹೊಂದಿದಾಗ ಖರೀದಿಯಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆ.ಡಿ.ಪಿ ಸಭಾಂಗಣದಲ್ಲಿಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದರಿವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರು ಸರಕು ಮತ್ತು ಸೇವೆಗಳಲ್ಲಿ ಮೋಸ ಹೋಗದಂತೆ ಜಾಗರೂಕರಾಗಬೇಕು. ವಸ್ತುಗಳಲ್ಲಿ ಯಾವುದೇ ಲೋಪದೋಷಗಳು ಕಂಡುಬರದಂತೆ ಸೇವೆಯನ್ನು ಪಡೆಯಬೇಕು. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ವಸ್ತುಗಳ ಬೆಲೆ, ಅದರ ಗುಣಮಟ್ಟ ಹಾಗೂ ಅದರ ನಿರ್ದಿಷ್ಠ ಅವಧಿ ಎಲ್ಲವನ್ನು ಸರಿಯಾಗಿ ನೋಡಬೇಕು. ಗ್ರಾಹಕರ ಕಾನೂನುಗಳ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಒಯೊಬ್ಬರು ಗ್ರಾಹಕರೆ. ರಾಷ್ಟ್ರೀಯ ಗ್ರಾಹಕರ ದಿನದ ಅಂಗವಾಗಿ ಎಲ್ಲರೂ ಗ್ರಾಹಕರ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಗ್ರಾಹಕಗಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿಯು ಎಲ್ಲರ ಹೊಣೆಯಾಗಿದೆ. ಗ್ರಾಹಕರು ಪ್ರತಿಯೊಂದು ವಸ್ತುಗಳ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು. ಸರಕು ಮತ್ತು ಸೇವೆಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎಂ.ವಿ. ಭಾರತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರು ಸರಕು ಮತ್ತು ಸೇವೆಗಳಲ್ಲಿ ಮೋಸ ಹೋದಾಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಕೇಂದ್ರದಲ್ಲಿ ದಾವೆ ಹೂಡಬಹುದು. ಗ್ರಾಹಕರು ವಸ್ತುಗಳ ಕೊಂಡುಕೊಳ್ಳುವಾಗ ವಸ್ತುಗಳ ಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ಇ-ಕಾರ್ಮಸ್‍ನಡಿ ವ್ಯಾಪಾರ ವ್ಯವಹಾರ ನಡೆಸುವಾಗ ಷರತ್ತುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ರಾಜು ಕೆ.ಎಸ್. ಅವರು ಮಾತನಾಡಿ ಗ್ರಾಹಕರು ಮೋಸಕ್ಕೆ ಒಳಗಾದಾಗ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಲ್ಲಿ ಯಾವ ಕಾನೂನಿನಡಿ ದಾವೆ ಹೂಡಬಹುದು. ಯಾವ ರೀತಿಯಲ್ಲಿ ಗ್ರಾಹಕರು ಪರಿಹಾರ ಕಂಡುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿ ನೀಡಿದರು. ಪ್ರೊಫೆಶನರಿ ತಹಶೀಲ್ದಾರ್ ರಂಜಿತ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕರಾದ ಶಿವರಾಜಮ್ಮ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ರಾಜೀವ್ ಬಿ.ಎನ್ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಶಾಟ್‍ಪುಟ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಅಂಧ ವಿದ್ಯಾರ್ಥಿ ಪವನ್ ಅವರನ್ನು ಜಿಲ್ಲಾಧಿಕಾರಿ ಹಾಗೂ ಗಣ್ಯರು ಸನ್ಮಾನಿಸಿದರು.