ಮಂಡ್ಯ: ನಗರದ ಪ್ರತಿಷ್ಠಿತ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಕಾರ್ಮೆಲ್ ವರ್ಣಚಿತ್ರ’ ವಿದ್ಯಾರ್ಥಿಗಳ ವಿಶೇಷ ಚಿತ್ರಕಲಾ ಪ್ರದರ್ಶನವನ್ನು ನಾಳೆ(ಜ.4) ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಕಲ್ಪನಾ ಶಕ್ತಿ ಹೆಚ್ಚಿಸಲು ಹಮ್ಮಿಕೊಂಡಿರುವ ಈ ಪ್ರದರ್ಶನ ನಗರದಲ್ಲಿಯೇ ಮೊದಲು ಎಂದು ಹೇಳಲಾಗಿದೆ.
ಶಾಲೆಯ ಸಭಾಂಗಣದಲ್ಲಿ ದಿನದ ಮಟ್ಟಿಗೆ ಆಯೋಜಿಸಿರುವ ಈ ಪದ್ರರ್ಶನದಲ್ಲಿ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ಸುಮಾರು ೧೫೦ ಮಕ್ಕಳು ತಮ್ಮ ಪ್ರತಿಭೆಯನ್ನು ಮೆರೆಯಲಿದ್ದಾರೆ. ಚಿತ್ರಕಲೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಮಕ್ಕಳು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಬೆಳಗ್ಗೆ 9.30ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಲಿದ್ದು, ಈ ಸಂದರ್ಭದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಶಿಕ್ಷಣಾಧಿಕಾರಿ ಚಂದ್ರಕಾoತ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಉಮೇಶ್, ಶಿಕ್ಷಣ ಸಂಯೋಜನಾಧಿಕಾರಿ ಸ್ವಾಮಿ ಭಾಗವಹಿಸಿ ಶುಭ ಕೋರಲಿದ್ದಾರೆ.
ಪ್ರೌಢಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಗ್ಲಾಡೀಸ್ ಕ್ಯಾಸ್ಟಲಿನೊ, ಮುಖ್ಯಶಿಕ್ಷಕಿ ಸಿಸ್ಟರ್ ಮೇರಿ ಪೌಲಿನ್, ಕಾರ್ಮೆಲ್ ಐಸಿಎಸ್‌ಇ ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಲಲಿತಾ ಮೇರಿ, ಕಾರ್ಮೆಲ್ ಐಸಿಎಸ್‌ಇ ಶಾಲೆಯ ಪ್ರತಿನಿಧಿ ಸಿಸ್ಟರ್ ಆಗ್ನೇಸ್ ಹಾಜರಿರುವರು.
ಚಿತ್ರಕಲೆಯಲ್ಲಿ ಯಾವುದೇ ತರಬೇತಿ ಪಡೆದ, ನುರಿತ ಕಲಾವಿದರಿಗಿಂತಲೂ ಮಿಗಿಲಾಗಿ ವಿದ್ಯಾರ್ಥಿಗಳು ಬಗೆಬಗೆಯ ಚಿತ್ರಗಳನ್ನು ರಚಿಸಿದ್ದು, ಇದೊಂದು ವಿಶಿಷ್ಟ ಚಿತ್ರಕಲಾ ಪ್ರದರ್ಶನವಾಗಿದೆ. ಜಿಲ್ಲೆಯಲ್ಲೇ ಇದೊಂದು ಹೊಸ ಪ್ರಯತ್ನ ಕೂಡ. ಯಾವುದೇ ಶಾಲೆಯ ಮಕ್ಕಳು ಬಂದು ವೀಕ್ಷಿಸಬಹುದು. ಸಿಸ್ಟರ್ ಮೇರಿ ಪೌಲಿನ್ ಅವರ ಮಾರ್ಗದರ್ಶನ ಹಾಗೂ ಒತ್ತಾಸೆಯಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಚಿತ್ರಕಲಾ ಶಿಕ್ಷಕ ಪ್ರಶಾಂತ್ ಎನ್. ತಿಳಿಸಿದ್ದಾರೆ.