ಮೈಸೂರು: ನಾಳೆ ಫೆ.೧ರಂದು ನಗರದ ಕಲಾಮಂದಿರದಲ್ಲಿ ಬೆಳಗ್ಗೆ ೧೧.೩೦ಕ್ಕೆ ಜಿಲ್ಲಾಡಳಿತ, ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಜಿಲ್ಲಾ ಮಡಿವಾಳ ಮಾಚಿದೇವರ ಸಂಘದ ವತಿಯಿಂದ ಬೃಹತ್ ಮೆರವಣಿಗೆ ಸಹಾ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ರವಿನಂದನ್ ತಿಳಿಸಿದರು.
ನಾಳೆ ಬೆಳಗ್ಗೆ ೯ ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಇದರಲ್ಲಿ ಸುಮಾರು ಎರಡು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜತೆಗೆ ವಿವಿಧ ಕಲಾ ತಂಡಗಳೂ ಭಾಗಿಯಾಗಲಿವೆ. ಹೀಗಾಗಿ ಸಮುದಾಯದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲೆಂದು ನಗರ ಹಾಗೂ ತಾಲೂಕಿನಲ್ಲಿ ಮಡಿವಾಳ ಸಮುದಾಯದವರು ಅಂದು ತಮ್ಮ ಅಂಗಡಿಗಳಿಗೆ ರಜೆ ನೀಡಿ ಮೆರವಣಿಗೆ ಹಾಗೂ ಕಲಾಮಂದಿರದಲ್ಲಿನ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.