ಮೈಸೂರು: ನಾಳೆ ಎನ್ನುವುದು ಹಾಳು, ಇಂದು ಮತ್ತು ಈಗಲೇ ಎನ್ನಿ ಅದು ಯಶಸ್ಸಿನ ಹೆದ್ದಾರಿ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು. ಇಂದು ನಗರದ ಜ್ಞಾನಬುತ್ತಿ ಸಂಸ್ಥೆವತಿಯಿಂದ ಆಯೋಜಿಸಿದ್ದ ಯುಜಿಸಿ-ನೆಟ್ ಮತ್ತು ಕೆ-ಸೆಟ್ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ಇಂದು ಮಾಡುವ ಕೆಲಸವನ್ನು ನಾಳೆ ಮಾಡಿದರಾಯಿತು ಎನ್ನುವ ಉದಾಸೀನ ಮನೋಭಾವದಿಂದ ಹಲವು ಅದ್ಭುತ ಅವಕಾಶಗಳನ್ನು ಕಳೆದು ಕೊಳ್ಳುತ್ತಿದ್ದಾರೆ. ನಿಶ್ಚಿತ ಮತ್ತು ನಿಖರ ಗುರಿಯನ್ನು ಇಟ್ಟುಕೊಳ್ಳುವುದರ ಜೊತೆಗೆ ಒಂದು ವ್ಯವಸ್ಥಿತವಾದ ವೇಳಾಪಟ್ಟಿಯನ್ನು ಮಾಡಿಕೊಂಡು ನಿರಂತರ ಪರಿಶ್ರಮ ಹಾಕಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು. ನಾವು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಇತರರು ಮಾಡುವುದಕ್ಕಿಂತ ಭಿನ್ನವಾಗಿ ಆಲೋಚಿಸಿ ಕೆಲಸಮಾಡಿ ತೋರಿಸಿದರೆ ಬಹುಬೇಗ ವೃತ್ತಿ ಜೀವನದಲ್ಲಿ ಯಶಸ್ಸುಗಳಿಸಬಹುದು. ಕಠಿಣಪರಿಶ್ರಮವಿಲ್ಲದೆ ಯಾವುದೇ ಪ್ರತಿಫಲವನ್ನು ನಿರೀಕ್ಷೆಮಾಡಬೇಡಿ ಎಂದರು.
ಪ್ರತಿ ಸಾಧಕ ನಾನು ಇನ್ನು ಐದು ಅಥವಾ ಹತ್ತುವರ್ಷಗಳಲ್ಲಿ ನಾನು ಏನಾಗಬೇಕು ಮತ್ತು ಎಲ್ಲಿರ ಬೇಕುಎಂಬ ಗುರಿಯಿಟ್ಟುಕೊಂಡು ನಿರಂತರ ಶ್ರಮಹಾಕಬೇಕು ಎಂದು ಕಿವಿಮಾತು ಹೇಳಿದರು. ಮುಂದಿನ ಮಾರ್ಚ್ ನಂತರ ಕರ್ನಾಟಕದಲ್ಲಿ ಸುಮಾರು ಐದು ಸಾವಿರ ಅಧ್ಯಾಪಕರ ಹುದ್ದೆಯನ್ನು ತುಂಬಲು ಸರ್ಕಾರ ತಯಾರಿನಡೆಸುತ್ತಿದೆ. ಇಂತಹ ಅದ್ಭುತ ಚಿನ್ನದ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದರು.
ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದ ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್ ಮಾತನಾಡಿ ೨೫ ವರ್ಷಗಳ ಹಿಂದೆ ನಾನು ಜ್ಞಾನಬುತ್ತಿ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ಬಂದು ತರಬೇತಿಪಡೆದಿದ್ದನ್ನು ನೆನಪು ಮಾಡಿಕೊಂಡರು. ಸಾಧಕನಿಗೆ ಗುರು ಮತ್ತು ಗುರಿ ಇರಬೇಕು. ಪರೀಕ್ಷೆಯಲ್ಲಿ ಉತ್ತರಿಸುವಾಗ ಎಲ್ಲರಿಗಿಂತ ಭಿನ್ನವಾಗಿ ಬರೆದರೆ ಮೌಲ್ಯಮಾಪಕರ ಗಮನಸೆಳೆದು ಅತ್ಯುತ್ತಮ ಅಂಕಗಳನ್ನು ಗಳಿಸಬಹುದು ಎಂದು ತಮ್ಮದೇ ಆದ ಉದಾಹರಣೆಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತ ಸಹಕಾರ ಮಹಾಮಂಡಳದ ನಿರ್ದೇಶಕವೈ.ಎನ್. ಶಂಕರೇಗೌಡ ಮಾನತಾಡಿ ಅವಕಾಶಗಳು ಬಂದಾಗಬಾಚಿಕೊಳ್ಳುವ ಆಸೆಬುರು ಕತನ ವಿದ್ಯಾರ್ಥಿಗಳಲ್ಲಿ ಇರಬೇಕು. ಬೇರೆಲ್ಲಾ ಹುದ್ದೆಗಳಿಗಿಂತ ಅಧ್ಯಾಪಕರ ಹುದ್ದೆಯಜೀವನ ಸಂತೃಪ್ತಿಯಿಂದ ಕೂಡಿರುತ್ತದೆ. ಸಮಾಜದಲ್ಲಿ ವೈದ್ಯ ಮತ್ತುಅಧ್ಯಾಪಕರ ಹುದ್ದೆಗಳು ಘನತೆ-ಗೌರವದಿಂದ ಕೂಡಿರುತ್ತದೆ ಎಂದರು. ಸಮಾರಂಭದ ವೇದಿಕೆಯ ಮೇಲೆ ಶಿಕ್ಷಣ ತಜ್ಞರಾದಪ್ರೊ. ಎನ್.ಎನ್. ಪ್ರಹ್ಲಾದ್, ಪ್ರೊ. ಆರ್.ಎನ್. ಪದ್ಮನಾಭ, ಪ್ರೊ. ವಿ. ಜಯಪ್ರಕಾಶ್, ಪ್ರೊ. ಕೆ. ಯಶೋಧರ, ಪ್ರೊ. ಎನ್. ಮಹದೇವಸ್ವಾಮಿ, ಪ್ರೊ. ಕೃ.ಪ. ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿಎಚ್. ಬಾಲಕೃಷ್ಣ ಉಪಸ್ಥಿತರಿದ್ದರು.