ಮುಂಬೈ: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾದ ಮೂರನೇ ಸಭೆ ನಾಳೆ ಮುಂಬೈನಲ್ಲಿ ನಡೆಯಲಿದೆ. ಸಭೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇಂಡಿಯಾ ಮೈತ್ರಿಕೂಟದ ಮುಂಬೈ ಸಭೆಯಲ್ಲಿ ಲಾಂಛನ (ಲೋಗೊ)ಬಿಡುಗಡೆ ಮಾಡಿದ ನಂತರ ಕೂಟದ ಸಂಯೋಜಕ ಹುದ್ದೆಯ ಹೆಸರನ್ನು ಕೂಡ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಸಭೆಯಲ್ಲಿ ಭಾಗವಹಿಸಲು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಈಗಾಗಲೇ ಮುಂಬೈಗೆ ಆಗಮಿಸಿದ್ದಾರೆ. ಸಭೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚುನಾವಣೆಗಳು ಹತ್ತಿರದಲ್ಲಿರುವುದರಿಂದ ಈ ಎಲ್ಲ ಸಭೆಗಳು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾವು ಈಗ ಅಂತಿಮ ಮಾರ್ಗಸೂಚಿಯನ್ನು ರಚಿಸಬೇಕಾಗಿದೆ. ಆದರೆ, ಸೀಟುಗಳ ಹಂಚಿಕೆಯ ಬಗ್ಗೆ ಈಗಲೇ ಯಾವುದೇ ಅವಸರ ಮಾಡಕೂಡದು ಎಂದರು.
ಏತನ್ಮಧ್ಯೆ ಇಂಡಿಯಾ ಮೈತ್ರಿಕೂಟಕ್ಕೆ ತಾವು ಸೇರುವುದಿಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪುನರುಚ್ಚರಿಸಿದ್ದಾರೆ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಬಹುತೇಕ ಪಕ್ಷಗಳು ಬಡವರ ವಿರೋಧಿ, ಕೋಮುವಾದಿಯಾಗಿದ್ದು, ಬಂಡವಾಳಶಾಹಿ ನೀತಿಗಳನ್ನು ಹೊಂದಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಿಎಸ್‌ಪಿ ಆ ಎಲ್ಲ ಪಕ್ಷಗಳ ನೀತಿಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಿದೆ. ಹೀಗಾಗಿ ಅವರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ ೩೧ ಮತ್ತು ಸೆಪ್ಟೆಂಬರ್ ೧ ರಂದು ಮುಂಬೈನಲ್ಲಿ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯ ಬಗ್ಗೆ ಮಾಹಿತಿ ನೀಡಲು ಇಂದು ಜಂಟಿ ಪತ್ರಿಕಾಗೋಷ್ಠಿ ನಡೆಯಲಿದೆ. ಇಂದು ಸಂಜೆ ೪ ಗಂಟೆಗೆ ಮುಂಬೈನ ವಕೋಲಾದ ಗ್ರ್ಯಾಂಡ್ ಹಯಾತ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಶಿವಸೇನೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕಾಂಗ್ರೆಸ್ ರಾಜ್ಯ ಅಧ್ಯಕ್ಷ ನಾನಾ ಪಟೋಲೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಲಾಸಾಹೇಬ್ ಥೋರಟ್, ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ್ ಚೌಹಾಣ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.