Friday, April 18, 2025
Google search engine

Homeರಾಜ್ಯಸುದ್ದಿಜಾಲನಾಳೆ ಎಸ್.ಎಸ್.ಎಲ್.ಸಿ ಪರೀಕ್ಷೆ-2 : ಅಗತ್ಯ ಸಿದ್ದತೆ

ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷೆ-2 : ಅಗತ್ಯ ಸಿದ್ದತೆ

ಚಾಮರಾಜನಗರ: ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-೨ ಜೂನ್ ೧೪ ರಿಂದ ೨೨ ರವರೆಗೆ ನಡೆಯಲಿದ್ದು, ಒಟ್ಟು ೩೨೧೯ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದಾರೆ.

ನೊಂದಾಯಿತ ಅಭ್ಯರ್ಥಿಗಳಲ್ಲಿ ೨೯೬೦ ಪುನರಾವರ್ತಿತ, ೨೩೩ ಫಲಿತಾಂಶ ಸುಧಾರಣೆಗಾಗಿ ಮತ್ತು ೩೬ ಹೊಸ ಖಾಸಗಿ ಅಭ್ಯರ್ಥಿಗಳು ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧೨ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ವಿತರಣೆಗೆ ೭ ಮಾರ್ಗಗಳನ್ನು ರಚಿಸಿ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಎಲ್ಲಾ ಅಗತ್ಯ ಮೂಲ ಸೌಲಭ್ಯಗಳನ್ನು ಪರೀಕ್ಷಾ ಕೆಂದ್ರಗಳು ಹೊಂದಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಲಾಗಿದೆ. ಒಟ್ಟು ೧೨ ಪರೀಕ್ಷಾ ಕೇಂದ್ರಗಳ ಅಗತ್ಯವಿದ್ದು ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾ ಕಾರ್ಯವು ಪಾರದರ್ಶಕವಾಗಿ ನಡೆಯುತ್ತಿರುವುದನ್ನು ಖಚಿತ ಪಡಿಸಿಕೊಳ್ಳಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೇಂದ್ರೀಕೃತವಾಗಿ ವೆಬ್ ಕಾಸ್ಟಿಂಗ್ ಮಾಡಲು ಕ್ರಮವಹಿಸಲಾಗಿದೆ.
ಪರೀಕ್ಷಾ ಸಂಬಂಧ ಪೂರ್ವ ಸಿದ್ದತೆ ಕುರಿತು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಪರೀಕ್ಷೆ ೨ಕ್ಕೆ ನೋಂದಾಯಿಸಿರುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ತಪ್ಪದೇ ಹಾಜರಾಗಲು ಸಂಬಂಧಿಸಿದ ಪ್ರೌಢಶಾಲಾ ಮುಖ್ಯ ಶಿಕ್ಷಕರು ಅಗತ್ಯ ಕ್ರಮವಹಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತೊಮ್ಮೆ ಖುದ್ದು ಭೇಟಿ ನೀಡಿ ಎಲ್ಲಾ ಮೂಲ ಸೌಲಭ್ಯಗಳು ಸುಸ್ಥಿತಿಯಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದ ನಕ್ಷೆ, ಆಸನದ ವ್ಯವಸ್ಥೆ ಹಾಗೂ ಅಗತ್ಯ ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ಕಾಣಿಸುವಂತೆ ಪರೀಕ್ಷಾ ಕೇಂದ್ರದ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಪ್ರಕಟಿಸಿ ಪರೀಕ್ಷಾರ್ಥಿ ಸ್ನೇಹಿ ವಾತವರಣ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ನೆಲಮಹಡಿಯಲ್ಲಿ ಆಸನದ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನಿಯಮಾನುಸಾರ ಹೆಚ್ಚುವರಿ ಕಾಲಾವಕಾಶ ನೀಡಬೇಕು. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಮತ್ತು ಕಾರಿಡಾರ್‍ನಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿರಬೇಕು ಮತ್ತು ಪರೀಕ್ಷಾ ದಿನಗಳಂದು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಪರೀಕ್ಷೆ ನಡೆಯುವ ವೇಳೆ ಅನವಶ್ಯಕ ಹಾಗೂ ಉದ್ದೇಶಪೂರ್ವಕವಾಗಿ ಸಿ.ಸಿ ಕ್ಯಾಮೆರಗಳನ್ನು ಸ್ವಿಚ್ ಆಪ್ ಮಾಡಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.

ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರವಿರುವ ಪ್ರದೇಶದಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಕ್ರಮವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಇಲಾಖೆ ವತಿಯಿಂದ ಔಷದೋಪಚಾರಗಳೊಂದಿಗೆ ಶುಶ್ರೂಷಕಿಯರನ್ನು ನಿಯೋಜಿಸಬೇಕು. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಹಾಜರು ಪಡಿಸಿ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ಪ್ರಯಾಣಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಅವಕಾಶ ನೀಡಬೇಕು. ಪರೀಕ್ಷಾ ಅಕ್ರಮದಲ್ಲಿ ತೊಡಗುವವರು, ಪ್ರೇರಣೆ ನೀಡುವವರು ಹಾಗೂ ಸುಳ್ಳು ಸುದ್ದಿ ವದಂತಿಗಳನ್ನು ಹರಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ರೀತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular