ಮಂಗಳೂರು ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ಒಳಹರಿವು ಗಣನೀಯ ಕುಸಿತ ಕಂಡು ಬಂದಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ 30 ಗೇಟ್‌ಗಳಿದ್ದು ಮಂಗಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರಿಗಾಗಿ ಕೇವಲ ಒಂದು ಗೇಟ್‌ನಿಂದ ಹೊರಕ್ಕೆ ನೀರು ಬಿಡಲಾಗಿದೆ. ಮಂಗಳೂರು ಮಹಾನಗರದ ಜನತೆಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಬರದಂತೆ ಈಗಲೇ ನೀರು ಶೇಖರಿಸಿಡಲು ಆರಂಭವಾಗಿದೆ.
ಕಳೆದ ವರ್ಷ ನಿರಂತರ ಮಳೆ ಸುರಿಯುತ್ತಿದ್ದು ಮಳೆ ಬರುವ ಸಂದರ್ಭ ಎಲ್ಲಾ ಗೇಟ್‌ಗಳಿಂದ ನೀರನ್ನು ಹೊರಕ್ಕೆ ಬಿಡಲಾಗಿತ್ತು. ಆದರೆ ಈ ವರ್ಷ ಜುಲೈ ತಿಂಗಳಲ್ಲಿ ನಿರಂತರವಾಗಿ 15 ದಿನ ಮಳೆ ಸುರಿದಿದ್ದು, ನದಿಯ ನೀರಿನ ಮಟ್ಟ ಡ್ಯಾಂನಲ್ಲಿಯೂ 8.5ರಷ್ಟು ಹೆಚ್ಚಳವಾಗಿತ್ತು. ಅಲ್ಲದೇ ತಗ್ಗು ಪ್ರದೇಶಗಳೆಲ್ಲವೂ ಮುಳುಗಡೆಯಾಗಿತ್ತು.
ನೇತ್ರಾವತಿ ನದಿಯಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಡ್ಯಾಂ ಕಟ್ಟಿರುವುದರಿಂದ ನದಿಯಲ್ಲಿ ಒಳ ಹರಿವು ಈಗ ಸ್ಥಗಿತವಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ನೇತ್ರಾವತಿಯ ಒಳಹರಿವಿನ ಪ್ರಮಾಣ ಕುಸಿತವಾಗಿದೆ. ಆಗಸ್ಟ್ ತಿಂಗಳಲ್ಲಿ ಮಳೆ ಇಲ್ಲದಿದ್ದುದರಿಂದ ತುಂಬೆ ಡ್ಯಾಂನಲ್ಲಿ ನೀರು ಹೊರ ಬಿಡುವುದನ್ನು ಕಡಿಮೆ ಮಾಡಲಾಗಿದೆ.