ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೋಚಕತೆ ಸೃಷ್ಟಿಸಿದೆ.
ಮೊದಲ ದಿನ ಬ್ಯಾಟಿಂಗ್ ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದ ಆಸ್ಟ್ರೇಲಿಯಾನ್ನರು ದ್ವಿತೀಯ ದಿನ ಬೌಲಿಂಗ್ ನಲ್ಲಿ ಪಾರುಪತ್ಯ ಮೆರೆದರು. ಮೊದಲ ಇನ್ನಿಂಗ್ಸ್ ನಲ್ಲಿ ಕಾಂಗರೂ ಪಡೆ 469 ರನ್ ಕಲೆಹಾಕಿತು. ಆದರೆ, ಭಾರತ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. 318 ರನ್ ಗಳ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
ಮೊದಲ ದಿನದಾಟ ಹೇಗಿತ್ತು?:
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಕಾಂಗರೂ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಉಸ್ಮಾನ್ ಖ್ವಾಜಾ ಸೊನ್ನೆಗೆ ನಿರ್ಗಮಿಸಿದರು. ಮಾರ್ನಸ್ ಲಾಬುಶೇನ್ (26) ಹಾಗೂ ಡೇವಿಡ್ ವಾರ್ನರ್ (43) 69 ರನ್ಗಳ ಜೊತೆಯಾಟ ಆಡಿದರಷ್ಟೆ. ನಂತರ ಶುರುವಾಗಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಆಟ. ಆಕ್ರಮಣಕಾರಿ ಆಟದ ಮೂಲಕ ಆರಂಭದಿಂದಲೇ ಭಾರತಕ್ಕೆ ಎಚ್ಚರಿಕೆ ನೀಡಿದ ಹೆಡ್ ಅವರನ್ನು ಕಟ್ಟಿಹಾಕಲು ರೋಹಿತ್ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾದವು. ಹೆಡ್ ಅವರು ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು.
ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿ ದೊಡ್ಡ ಮೊತ್ತದ ಮುನ್ಸೂಚನೆ ನೀಡಿತ್ತು. ಹೆಡ್ (146) ಹಾಗೂ ಸ್ಟೀವ್ ಸ್ಮಿತ್ (95) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಂಡಿಯಾ ಪರ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದರು.
ದ್ವಿತೀಯ ದಿನದಾಟ ಹೇಗಿತ್ತು?:
ಬೃಹತ್ ಮೊತ್ತ ಗಳಿಸುವ ಗುರಿಯೊಂದಿಗೆ 2ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ಮೊದಲ ದಿನದ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. 146 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹೆಡ್ 163 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ 121 ರನ್ಗೆ ಅಂತ್ಯವಾಯಿತು. ಈ ಇಬ್ಬರು ಔಟಾದ ನಂತರ ಅಲೆಕ್ಸ್ ಕ್ಯಾರಿ 48 ರನ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ 9 ರನ್ ಗಳಿಸಿದರು. ನಥಾನ್ ಲಿಯೊನ್ 9 ರನ್ಗೆ ನಿರ್ಗಮಿಸಿದರು. ಅಂತಿಮವಾಗಿ ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರೆ ಶಾರ್ದೂಲ್ ಠಾಕೂರ್ ಹಾಗೂ ಶಮಿ ತಲಾ 2ವಿಕೆಟ್‌ಗಳನ್ನು ಪಡೆದರು.
ಭಾರತದ ಬ್ಯಾಟಿಂಗ್ ವೈಫಲ್ಯ:
ಭಾರತ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಇಬ್ಬರೂ ಬ್ಯಾಟರ್ ಗಳು ವೈಫಲ್ಯ ಅನುಭವಿಸಿದರು. ನಾಯಕ ರೋಹಿತ್ ಕೇವಲ 15 ರನ್ ಗಳಿಗೆ ಪ್ಯಾಟ್ ಕಮ್ಮಿನ್ಸ್ ಎಸತೆದಲ್ಲಿ ಎಲ್ ಬಿ ಬಲೆಗೆ ಬಿದ್ದರೆ ಗಿಲ್ ಆಟ 13 ರನ್ ಗಳಿಗೆ ಅಂತ್ಯವಾಯಿತು. ಬಳಿಕ ಕ್ರೀಸ್ಗೆ ಬಂದ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್ ಗೆ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಇನ್ನಿಂಗ್ ಕಟ್ಟಿ ತಂಡಕ್ಕೆ ನೆರವಾದರು.
ರಹಾನೆ ಮತ್ತು ಜಡೇಜಾ ಜೋಡಿ 71 ರನ್ ಗಳ ಜೊತೆಯಾಟ ಆಡಿದರು. ಆದರೆ, ಅರ್ಧ ಶತಕದ ಹೊಸ್ತಿಲಿನಲ್ಲಿ ಎಡವಿದ ಜಡೇಜಾ 51 ಬಾಲ್ ಗಳಲ್ಲಿ 7 ಬೌಂಡರಿ ಮತ್ತು ಸಿಕ್ಸರ್ ಸಮೇತ 48 ರನ್ ಗೆ ನಿರ್ಗಮಿಸಿದರು. ಮತ್ತೊಂದೆಡೆ, 29 ರನ್ ಗಳಿಸಿರುವ ರಹಾನೆ ಹಾಗೂ 5 ರನ್ ಗಳಿಸಿರುವ ಶ್ರೀಕರ್ ಭರತ್ ಇಂದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದ್ದು 318 ರನ್ ಗಳ ಹಿನ್ನಡೆಯಲ್ಲಿದೆ.