ಮೈಸೂರು: ಮೈಸೂರಿನ ಕನೆಕ್ಟಿವಿಟಿ ಉತ್ತಮವಾಗಿದೆ. ಮೈಸೂರಿನ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಬೇಕಿದ್ದು, ಆರೋಗ್ಯ ಪ್ರವಾಸೋದ್ಯಮವನ್ನೂ ಅಭಿವೃದ್ಧಿಪಡಿಸಬೇಕು ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಕರ್ಟನ್ ರೇಸರ್ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಹಿಂದೆಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ. ರೈಲು, ರಸ್ತೆ ಹಾಗೂ ವಿಮಾನ ಮಾರ್ಗ ಅಭಿವೃದ್ಧಿಯಾಗುತ್ತಿದೆ. ಹೀಗಾಗಿ ಈಗ ಮೈಸೂರಿಗೆ ಸಂಪರ್ಕ ಸುಲಭವಾಗಿದೆ. ಈ ಸಮಯದಲ್ಲಿ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲು ಬಹಳಷ್ಟು ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರಿನಲ್ಲಿ ಎಲ್ಲ ವಯೋಮಾನದವರಿಗೂ ಸರಿಹೊಂದುವ ಪ್ರವಾಸಿ ಆಕರ್ಷಣೆಗಳಿವೆ. ಸಣ್ಣ ಮಕ್ಕಳಿಂದ ಮೊದಲುಗೊಂಡು ವಿವಿಧ ಆಸಕ್ತಿಗಳಿರುವ ಎಲ್ಲರಿಗೂ ಮೈಸೂರು ಹೇಳಿ ಮಾಡಿಸಿದ ಸ್ಥಳ. ಮೈಸೂರಿನಲ್ಲಿ ನೈಟ್ ಲೈಫ್ ಆರಂಭವಾಗಬೇಕು. ಸ್ಕಾಲ್‌ನಂತಹ ಸಂಸ್ಥೆಗಳಿಂದ ನಮ್ಮ ಊರಿನ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ಸ್ಕಾಲ್‌ನ ಪ್ರಯತ್ನ ಶ್ಲಾಘನೀಯ. ಸ್ಕಾಲ್ ಇಂಡಿಯಾ ಕಾಂಗ್ರೆಸ್ ಯಶಸ್ವಿಯಾಗಲಿ ಎಂದು ಆಶಿಸಿದರು.
ಪ್ರವಾಸಿಗರು ಮೈಸೂರಿಗೆ ಬಂದು ಹೆಚ್ಚು ದಿನಗಳ ಕಾಲ ಇರುವಂತಾಗಬೇಕು. ಈ ನಿಟ್ಟಿನಲ್ಲಿ ಸ್ಕಾಲ್ ಇಂಡಿಯಾ ಕಾಂಗ್ರೆಸ್ ಬಹಳಷ್ಟು ಸಹಕಾರಿಯಾಗಲಿದೆ. ಜತೆಗೆ ಆರೋಗ್ಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಆರೋಗ್ಯ ಕ್ಷೇತ್ರಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಪ್ರವಾಸಿಗರು, ಕಂಪನಿಗಳು ಹೆಚ್ಚು ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಮಾತನಾಡಿ, ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಪರಿಕಲ್ಪನೆ, ಯೋಜನೆ ಕೇಳಿದರೆ ಖುಷಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು. ಇದಕ್ಕೆ ನಮ್ಮ ಸಹಕಾರ ಇದೆ ಎಂದು ತಿಳಿಸಿದರು.
ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಚೇರ್‌ಮನ್ ಸುದೀಪ್ತಾ ದೇಬ್ ಮಾತನಾಡಿ, ರಾಜ್ಯದ ಎರಡು ಅತಿದೊಡ್ಡ ನಗರಗಳಾದ ಬೆಂಗಳೂರು ಹಾಗೂ ಮೈಸೂರಿನಲ್ಲಿ ಅ.೪ರಿಂದ ೮ರವರೆಗೆ ಸ್ಕಾಲ್ ಇಂಡಿಯಾ ಕಾಂಗ್ರೆಸ್ ನಡೆಯಲಿದೆ. ಸ್ಕಾಲ್‌ನ ಇತಿಹಾಸದಲ್ಲೇ ಇದೊಂದು ವಿನೂತನ ಪ್ರಯತ್ನ. ಎರಡೂ ನಗರಗಳನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯನ್ನಾಗಿ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಇದರ ಭಾಗವಾಗಿ ಚರ್ಚೆಗಳು, ವಸ್ತುಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಲೋಗೋ, ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು. ಸ್ಕಾಲ್ ಇಂಟರ್‌ನ್ಯಾಷನಲ್ ಇಂಡಿಯಾದ ಅಧ್ಯಕ್ಷ ಕಾರ್ಲ್ ವಾಝ್, ಸ್ಕಾಲ್ ಬೆಂಗಳೂರು ವಿಭಾಗದ ಅಧ್ಯಕ್ಷ ಅಯ್ಯಪ್ಪ ಸೋಮಯ್ಯ, ಸ್ಕಾಲ್ ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಸ್ಕಾಲ್ ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎ.ಜಯಕುಮಾರ್ ಮತ್ತಿತರರು ಹಾಜರಿದ್ದರು.