ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಸುರತ್ಕಲ್ ನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ತ್ಯಾಜ್ಯ ನೀರನ್ನು ತೋಕೂರು ಹಳ್ಳದ ಮೂಲಕ ಜೀವನದಿ ಪಲ್ಗುಣಿಗೆ ಬಿಡಲಾಗುತ್ತಿದ್ದು, ತೋಕೂರು ಹಳ್ಳ ಕೊಳೆತು ನಾರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸ್ವಲ್ಪ ದಿನದ ವಿರಾಮದ ಬಳಿಕ ಪಲ್ಗುಣಿಯನ್ನು ಸೇರುವ ತೋಕೂರು ಹಳ್ಳಕ್ಕೆ ಜೋಕಟ್ಟೆ ಹಾಗೂ ಬೈಕಂಪಾಡಿ ಕೈಗಾರಿಕಾ ವಲಯದ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ತ್ಯಾಜ್ಯ ಹರಿಯಬಿಡಲಾಗಿದೆ.

ರುಚಿಗೋಲ್ಡ್, ಅಧಾನಿ ವಿಲ್ಮರ್, ಯುಬಿ ಬಿಯರ್, ಟೋಟಲ್ ಗ್ಯಾಸ್, ಫಿಷ್ ಮಿಲ್ ಮುಂತಾದ ಮಧ್ಯಮ ಕೈಗಾರಿಕೆಗಳು ಇರುವ ಭಾಗದಿಂದ ಈ ಮಾಲಿನ್ಯ ಕೈಗಾರಿಕಾ ಘಟಕಗಳಿಂದ ಶುದ್ದೀಕರಣ ಇಲ್ಲದೆ ನೇರವಾಗಿ ತೋಕೂರು ಹಳ್ಳ ಸೇರುತ್ತಿದೆ. ತೋಕೂರು, ಕುಡಂಬೂರು, ಜೋಕಟ್ಟೆ ಸಹಿತ ಸುತ್ತಲ ಗ್ರಾಮಗಳ ಅಂತರ್ಜಲ, ಕೃಷಿಯ ಮೂಲ ಆಗಿರುವ ತೋಕೂರು ಹಳ್ಳ ಈಗ ಕೊಳೆತು ಅಸಹ್ಯವಾಗಿ ನಾರುತ್ತಿದೆ. ತೋಕೂರು ಹಳ್ಳದ ಮೂಲಕ ಕೈಗಾರಿಕಾ ತ್ಯಾಜ್ಯ ನೀರು ಜೀವನದಿ ಪಲ್ಗುಣಿಯನ್ನು ಸೇರುತ್ತಿದೆ. ಇದರಿಂದ ಈ ಭಾಗದ ನದಿಯೂ, ನದಿ ದಂಡೆಯ ಜನರಿಗೆ ಬಳಕೆಗೆ ಅಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.