Saturday, April 19, 2025
Google search engine

Homeರಾಜ್ಯಸುದ್ದಿಜಾಲಸಂಪಾಜೆ-ಕಾಟಕೇರಿ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಪ್ರತಾಪ್ ಸಿಂಹ ಚಾಲನೆ

ಸಂಪಾಜೆ-ಕಾಟಕೇರಿ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಪ್ರತಾಪ್ ಸಿಂಹ ಚಾಲನೆ

ಮಡಿಕೇರಿ: ಸಂಪಾಜೆ-ಕಾಟಕೇರಿ ೨೧.೬ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಸಂಸದರಾದ ಪ್ರತಾಪ್ ಸಿಂಹ ಅವರು ಸೋಮವಾರ ಚಾಲನೆ ನೀಡಿದರು. ಸಂಪಾಜೆಯ ಗೇಟ್ ಬಳಿ ಚಾಲನೆ ನೀಡಿ ಮಾತನಾಡಿದ ಪ್ರತಾಪ್ ಸಿಂಹ ಅವರು ಸುಮಾರು ೧೪.೧೬ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ೬ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದರು ತಿಳಿಸಿದರು. ಸಂಪಾಜೆಯಿಂದ ಸುಂಟಿಕೊಪ್ಪದವರೆಗೆ ೨೧ ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸಲಾಗಿದ್ದು, ಅನುಮೋದನೆ ದೊರೆಯಬೇಕಿದೆ ಎಂದು ಸಂಸದರು ಮಾಹಿತಿ ನೀಡಿದರು.

ಹಾಗೆಯೇ ಕುಶಾಲನಗರ ದಿಂದ ಸಂಪಾಜೆಯವರೆಗೆ ಅಪಘಾತ ವಲಯವನ್ನು ಗುರುತಿಸಲಾಗಿದ್ದು, ಪ್ರಮುಖವಾಗಿ ಬೋಯಿಕೇರಿ ಮತ್ತು ಆನೆಕಾಡು ಬಳಿ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದಕ್ಕಾಗಿ ೫೦೦ ಲಕ್ಷ ರೂ. ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು. ಕೊಡಗು ಜಿಲ್ಲೆಯ ಕುಶಾಲನಗರ ದಿಂದ ಸಂಪಾಜೆವರೆಗೆ ಹೆದ್ದಾರಿ ಭಾಗದಲ್ಲಿ ಸುಮಾರು ೧.೩ ಕಿ.ಮೀ. ಮಳೆ ನೀರು ನಿಲ್ಲುವ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಪ್ರದೇಶವನ್ನು ವಿಸ್ತರಿಸಿ ರಸ್ತೆ ಎತ್ತರೀಕರಣಗೊಳಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಈ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅಂದಾಜು ಪಟ್ಟಿ ಸಲ್ಲಿಸಬೇಕಿದೆ ಎಂದು ಪ್ರತಾಪ್ ಸಿಂಹ ಅವರು ಹೇಳಿದರು. ಹೆದ್ದಾರಿಯಲ್ಲಿ ಎರಡು ಕಡೆ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಹಾಗೆಯೇ ೮ ಕಡೆ ಸಣ್ಣಪುಟ್ಟ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ. ಜೋಡುಪಾಲ ಬಳಿ ಹೊಸದಾಗಿ ಸೇತುವೆ ನಿರ್ಮಿಸಲಾಗುವುದು ಎಂದು ಸಂಸದರು ವಿವರಿಸಿದರು.

೨೦೧೮ ರಲ್ಲಿ ಸಂಭವಿಸಿದ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ೧೯ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿತ್ತು, ೨೦೧೯ ರಲ್ಲಿಯೂ ಸಹ ಅತಿವೃಷ್ಟಿಯಾದ ಕಾರಣ ೨೧ ತಡೆಗೋಡೆಗಳನ್ನು ನಿರ್ಮಿಸಲಾಗುತ್ತದೆ ಎಂದು ಪ್ರತಾಪ್ ಸಿಂಹ ಅವರು ಹೇಳಿದರು. ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದರು.


ಸಂಪಾಜೆ ಗ್ರಾ.ಪಂ.ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಎಚ್.ಗಿರೀಶ್, ಸಹಾಯಕ ಎಂಜಿನಿಯರ್ ಹನುಮಂತ, ಸುಧಾಕರಶೆಟ್ಟಿ ಇತರರು ಇದ್ದರು.

RELATED ARTICLES
- Advertisment -
Google search engine

Most Popular