Tuesday, April 22, 2025
Google search engine

Homeಸ್ಥಳೀಯನಾಡಹಬ್ಬದ ಮಹತ್ವ ಕಡಿಮೆಯಾಗಬಾರದೆಂದು ಸಾಂಪ್ರದಾಯಿಕ ದಸರಾ ಆಚರಣೆ: ಸಿಎಂ ಸಿದ್ದರಾಮಯ್ಯ

ನಾಡಹಬ್ಬದ ಮಹತ್ವ ಕಡಿಮೆಯಾಗಬಾರದೆಂದು ಸಾಂಪ್ರದಾಯಿಕ ದಸರಾ ಆಚರಣೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿ ದಸರಾ ಆಚರಿಸುತ್ತಿಲ್ಲ. ಆದ್ರೆ ದಸರಾ ಮಹತ್ವಕ್ಕೆ ಯಾವುದೇ ಕುಂದು ಉಂಟಾಗದಂತೆ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಸರ್ಕಾರ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ದಸರಾ ಹಬ್ಬಕ್ಕೆ ನಾದಬ್ರಹ್ಮ ಹಂಸಲೇಖ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮುಖ್ಯಮಂತ್ರಿ ಅವರು ಭಾಷಣ ಮಾಡಿದರು. ಈ ವೇಳೆ, ದುರಾದೃಷ್ಟವಶಾತ್ ಈ ಬಾರಿ ಮಳೆಯಾಗಲಿಲ್ಲ. ಬರಗಾಲ ಬಂದಿದೆ. ನಾನು ಮಹದೇವಪ್ಪನಿಗೆ ಹೇಳಿದೆ, ಈ ಸಾರಿ ನಾವು ದಸರಾವನ್ನು ನಿಲ್ಲಿಸಲು ಆಗುವುದಿಲ್ಲ. ಆದರೆ ಸಾಂಪ್ರದಾಯಿಕವಾಗಿ ದಸರಾವನ್ನು ಮಾಡಲೇಬೇಕು. ಯಾಕೆಂದರೆ ಜನರು ಕೂಡ ಅದನ್ನು ಅಪೇಕ್ಷೆ ಮಾಡುತ್ತಾರೆ. ನಾವು ಮಾಡಲೇಬೇಕಾಗುತ್ತದೆ. ಹೀಗಾಗಿ ನಾವು ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕು. ಯಾವುದೇ ಕಾರಣಕ್ಕೆ ದಸರಾ ಮಹತ್ವ ಕಡಿಮೆಯಾಗಬಾರದೆಂದು ಮಾತುಗಳನ್ನು ಹೇಳಿದ್ದೆ ಎಂದರು.

ನಾವು ದಸರಾ ಹಬ್ಬವನ್ನು ನವರಾತ್ರಿ ಹಬ್ಬ ಎಂದು ಕರೆಯುತ್ತೇವೆ. ೧೦ನೆಯ ದಿನ ಜಂಬೂ ಸವಾರಿ ನಡೆಯುತ್ತದೆ. ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ ಆಚರಣೆಯಾಗಿತ್ತು. ವಿಜಯನಗರ ಸಾಮ್ರಾಜ್ಯ ವೈಭವಯುತವಾಗಿತ್ತು. ಈ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಸೇರು ಬಳ್ಳಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ ಮೈಸೂರು ಅರಸರು ದಸರಾ ಹಬ್ಬವನ್ನು ಆಚರಣೆ ಮಾಡಲು ಪ್ರಾರಂಭಿಸಿದರು. ಈಗ ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ದಸರಾ ಆಚರಣೆಯ ಮೂಲಕ ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಹಾಗೂ ಪರಂಪರೆಯನ್ನು ಜನರಿಗೆ ಸಾರುವ ಕೆಲಸ ಮಾಡುತ್ತದೆ. ಕನ್ನಡ ನಾಡಿನ ಸಮೃದ್ಧಿ, ವೈಭವವನ್ನು ವಿಶ್ವಕ್ಕೆ ಸಾರುವ ಕೆಲಸವನ್ನು ನಾವು ದಸರಾ ಮೂಲಕ ಮಾಡುತ್ತಿದ್ದೇವೆ. ನಮ್ಮ ನಾಡು ಸಮೃದ್ಧವಾಗಿದೆ. ಕರ್ನಾಟಕ ನಾಡಿನ ಜನ ಪ್ರೀತಿ ವಿಶ್ವಾಸ, ಸಹಕಾರ ಗೌರವದ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಎಲ್ಲರೂ ಪ್ರೀತಿ ವಿಶ್ವಾಸದಿಂದ ಕಾಣಬೇಕು. ಸಂವಿಧಾನದ ಪೀಠಿಕೆಯಲ್ಲಿ ಕಾನೂನು ದೃಷ್ಟಿಯಿಂದ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ ಅವರು ಮಾತನಾಡಿ ವಿಜಯದಶಮಿ ವಿಜಯದ ಒಂದು ಸಂಕೇತ. ಎಲ್ಲಾ ಶಕ್ತಿಯನ್ನು ಹೊಂದಿರುವ ತಾಯಿ ಚಾಮುಂಡೇಶ್ವರಿ ರಾಕ್ಷಸರನ್ನು ಸಂಹಾರ ಮಾಡಿದಳು. ಇಂದು ನಮ್ಮಲ್ಲಿಯೇ ರಾಕ್ಷಸ ಗುಣಗಳು ಇವೆ. ಇವನ್ನು ಬಿಟ್ಟು ಎಲ್ಲರೂ ಶಾಂತಿ ಸೌಹಾರ್ದತೆ ಯಿಂದ ನಡೆದುಕೊಂಡು ಹೋಗಬೇಕು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾಗೆ ಸೇರುತ್ತಾರೆ. ೯ ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ಎಲ್ಲರೂ ಭಾಗಿಗಳಾಗಿ ಎಂದರು.

RELATED ARTICLES
- Advertisment -
Google search engine

Most Popular