Monday, April 21, 2025
Google search engine

Homeಸ್ಥಳೀಯಯುವಕರಿಗೆ ಕೌಶಲ ಕಲಿಸಿ ಉದ್ಯೋಗಿಗಳನ್ನಾಗಿ ಮಾಡಿ

ಯುವಕರಿಗೆ ಕೌಶಲ ಕಲಿಸಿ ಉದ್ಯೋಗಿಗಳನ್ನಾಗಿ ಮಾಡಿ

ಮೈಸೂರು: ಕೈಗಾರಿಕೆಗಳ ಸ್ಥಾಪನೆಗೆ ಮೈಸೂರಿನಲ್ಲಿ ವಿಫುಲ ಅವಕಾಶಗಳಿವೆ. ಆದರೆ, ಕೌಶಲಯುಕ್ತ ಯುವಕರ ಕೊರತೆಯಿದೆ. ಹೀಗಾಗಿ ಯುವಕರನ್ನು ಕೌಶಲವಂತರನ್ನಾಗಿ ಮಾಡಿ ಉದ್ಯೋಗಿಗಳನ್ನಾಗಿ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ಕಿಲ್ ಕನೆಕ್ಟ್-೨೦೨೩ ಉದ್ಯಮಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭ ಮತ್ತು ಪ್ರಗತಿಗೆ ತುಂಬಾ ಅನುಕೂಲವಿದೆ. ಕೈಗಾರಿಕೆಗಳು ಬರುತ್ತಿವೆ. ಆದರೆ, ಉದ್ಯೋಗಕ್ಕೆ ತಕ್ಕಂತೆ ಅರ್ಹರು ಸಿಗುತ್ತಿಲ್ಲ ಎನ್ನುವ ಮಾತುಗಳನ್ನು ದೂರ ಮಾಡಬೇಕಿದೆ ಎಂದರು.
ಪದವಿ ಮುಗಿಸಿ ಹೊರ ಬರುತ್ತಿರುವವರ ಪ್ರಮಾಣಕ್ಕೆ ತಕ್ಕಂತೆ ಉದ್ಯೋಗಗಳು ಸಿಗಬೇಕಿದೆ. ಯುವಜನತೆಗೆ ಕೈಗಾರಿಕೆಗಳಲ್ಲಿ ಕೆಲಸ ಸಿಗಬೇಕು ಎಂದರೆ ಕೌಶಲ ಬೇಕಾಗಿದೆ. ಈ ಕೌಶಲತೆಯ ಕೊರತೆ ನೀಗಿಸಲು ತರಬೇತಿ ನೀಡಬೇಕು. ಇಲ್ಲದಿದ್ದರೆ ಉದ್ಯಮಿಗಳು ಕೆಲಸಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೌಶಲ್ಯ ತರಬೇತಿ ಪಡೆಯಬೇಕು. ನನಗೆ ಗೊತ್ತಿಲ್ಲ, ನಾನು ನೋಡುವುದು ಇಲ್ಲ, ಅದನ್ನು ಮಾಡಲು ಸಾಧ್ಯವಾಗಲ್ಲ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕಲಿಯಬೇಕು. ಹಾಗಾಗಿ, ಕೌಶಲ ತರಬೇತಿ ಪಡೆದುಕೊಂಡು ಉದ್ಯೋಗ ಪಡೆದುಕೊಳ್ಳುವುದು ಸೂಕ್ತ ಎಂದರು.
ಪ್ರತಿ ದಿನ ನಮ್ಮ ಕಚೇರಿಗೆ ೨೦-೩೦ ಮಂದಿ ಎರಡು-ಮೂರು ಪದವಿ ಪಡೆದವರು ಡಾಟಾ ಎಂಟ್ರಿ ಕೆಲಸವನ್ನಾದರೂ ಕೊಡಿಸಿ ಎಂದು ಬರುತ್ತಾರೆ. ನಾವು ಗುಣಮಟ್ಟದ ಅಭ್ಯರ್ಥಿಗಳನ್ನು ತಯಾರು ಮಾಡಬೇಕು. ಉದ್ಯಮಿಗಳು ತಮ್ಮ ಕೆಲಸಕ್ಕೆ ಹೊಂದುವಂತಹವರನ್ನು ಹುಡುಕುವುದರಿಂದ ಒಂದಿಷ್ಟು ಕೌಶಲ ತರಬೇತಿ ಕೊಡಬೇಕು ಎಂದು ನುಡಿದರು.
ಭಾಷಾ ಸಮಸ್ಯೆಯಿಂದ ಕೆಲವರಿಗೆ ಉದ್ಯೋಗ ದೊರೆಯದೆ ಇರುವುದನ್ನು ನೋಡಿದ್ದೇವೆ. ಹಾಗಾಗಿ, ಕೌಶಲ್ಯದ ಜತೆಗೆ ಭಾಷೆ ಹೇಳಿಕೊಡಬೇಕು. ಮೈಸೂರಿನಲ್ಲಿ ನಡೆಯುತ್ತಿರುವ ಸ್ಕಿಲ್ ಕನೆಕ್ಟ್‌ನಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ್ ಮಾತನಾಡಿ, ರಾಜ್ಯಸರ್ಕಾರ ೨೦೧೭ರಲ್ಲಿ ನಿಗಮ ಸ್ಥಾಪನೆ ಮಾಡಿದ ಮೇಲೆ ಉದ್ಯಮಿಗಳು ಮತ್ತು ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿ ಒಂದೇ ವೇದಿಕೆ ಸೃಷ್ಟಿಸಲಾಗುತ್ತಿದೆ. ಇದುವರೆಗೆ ೬೧ ಸಾವಿರ ಅಭ್ಯರ್ಥಿಗಳು ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ ತಮ್ಮ ವಿವರವನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿರುವ ೪೪೨ ಪದವಿ ಕಾಲೇಜುಗಳು, ಇಂಜಿನಿಯರಿಂಗ್, ಐಟಿಐ, ಡಿಪ್ಲೋಮಾ ಕಾಲೇಜುಗಳಲ್ಲಿ ಉದ್ಯೋಗ ಮೇಳ ಮಾಡುವಾಗ ಉದ್ಯಮಿಗಳಿಗೆ ಅನುಕೂಲವಾಗುವ ರೀತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಕಾರ ನೀಡುವ ಜತೆಗೆ, ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಅಭ್ಯರ್ಥಿಗಳು ಪೋರ್ಟಲ್‌ನಲ್ಲಿ ತಮ್ಮ ಬಯೋಡೇಟಾ ಅಪ್‌ಲೋಡ್ ಮಾಡಿದರೆ ಅದನ್ನು ಉದ್ಯಮಿಗಳು ಪರಿಶೀಲಿಸಿ, ತಮಗೆ ಸೂಕ್ತ ಎನ್ನಿಸುವ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ನೇಮಕ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡಲಾಗಿದೆ ಎಂದು ವಿವರಿಸಿದರು.
ಜಿಪಂ ಯೋಜನಾ ನಿರ್ದೇಶಕಿ ಸವಿತಾ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ನಾರಾಯಣಮೂರ್ತಿ ಹಾಜರಿದ್ದರು. ಸಮಾವೇಶದಲ್ಲಿ ೨೦೦ಕ್ಕೂ ಹೆಚ್ಚು ಉದ್ಯಮಿಗಳು, ಮೆಂಟರ್ಸ್‌ಗಳು ಪಾಲ್ಗೊಂಡಿದ್ದರು.

ಪೋರ್ಟಲ್ ಪ್ರಯೋಜನಗಳು: ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ ಉದ್ಯಮಿಗಳು ಹಾಗೂ ಅಭ್ಯರ್ಥಿಗಳು ಸಂಸ್ಥೆ, ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕಿದೆ. ಅಭ್ಯರ್ಥಿಗಳು ತಮ್ಮ ಬಯೋಡೇಟಾ ಅಪ್‌ಲೋಡ್ ಮಾಡಿದಾಗ ಅದನ್ನು ಉದ್ಯಮಿಗಳು ನೇರವಾಗಿ ನೋಡಿ ಪರಿಶೀಲಿಸುವುದು, ಇ-ಮೇಲ್ ಮೂಲಕ ಪ್ರತಿಕ್ರಿಯೆ ನೀಡಿ ತಮಗೆ ಸೂಕ್ತ ಎನ್ನಿಸಿದರೆ ಅವರನ್ನು ಸಂದರ್ಶಿಸಿ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅಲೆಯುವುದು ತಪ್ಪಿ ಉದ್ಯಮಿಗಳು-ಅಭ್ಯರ್ಥಿಗಳ ನಡುವೆ ನೇರ ವೇದಿಕೆ ಕಲ್ಪಿಸುತ್ತದೆ. ಉದ್ಯೋಗಕ್ಕಾಗಿ ಖಾಸಗಿ ಏಜೆನ್ಸಿಗಳ ಹಣದ ಆಮಿಷದಿಂದ ದೂರವಿರುವುದು, ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಅಲೆಯುವುದು ತಪ್ಪಲಿದೆ.

RELATED ARTICLES
- Advertisment -
Google search engine

Most Popular