ಹೈದರಾಬಾದ್ : ʼಪುಷ್ಪ 2: ದಿ ರೂಲ್ʼ ಚಿತ್ರದ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಡಿ.4ರಂದು ʼಪುಷ್ಪ 2: ದಿ ರೂಲ್ʼ ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತದಲ್ಲಿ ದಿಲ್ ಸುಖ್ ನಗರದ ನಿವಾಸಿ ರೇವತಿ(39) ಎಂಬ ಮಹಿಳೆ ಮೃತಪಟ್ಟಿದ್ದು, ಅವರ ಪುತ್ರ ಶ್ರೀ ತೇಜ್ ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಥಿಯೇಟರ್ ಮಾಲಕ ಸಂದೀಪ್, ಸೀನಿಯರ್ ಮ್ಯಾನೇಜರ್ ನಾಗರಾಜು, ಮ್ಯಾನೇಜರ್ ವಿಜಯ್ ಚಂದ್ರ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಥಿಯೇಟರ್ ಆಡಳಿತದ ನಿರ್ಲಕ್ಷ್ಯದಿಂದ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರೇಕ್ಷಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾದ ಕಾರಣ ನೂಕುನುಗ್ಗಲು ಉಂಟಾಗಿದೆ ಎಂದು ಚಿಕ್ಕಡಪಲ್ಲಿ ವಿಭಾಗದ ಎಸಿಪಿ ಎಲ್. ರಮೇಶ್ ಕುಮಾರ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸರು BNS ಕಾಯಿದೆಯ ಸೆಕ್ಷನ್ 105, 118(1)r/w3(5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಮೃತ ರೇವತಿಯ ಕುಟುಂಬಕ್ಕೆ ಅಲ್ಲು ಅರ್ಜುನ್ 25 ಲಕ್ಷ ರೂ. ನೆರವು ಘೋಷಿಸಿದ್ದಾರೆ. ಇದಲ್ಲದೆ ಶ್ರೀ ತೇಜ್ ಅವರ ವೈದ್ಯಕೀಯ ವೆಚ್ಚವನ್ನು ಕೂಡ ಭರಿಸುವುದಾಗಿ ಹೇಳಿದ್ದಾರೆ.