Tuesday, December 16, 2025
Google search engine

Homeರಾಜ್ಯಸುದ್ದಿಜಾಲನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಬುಧವಾರದಿಂದ (ಡಿಸೆಂಬರ್ 17) ಟ್ರಯಲ್ ಆರಂಭ

ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಬುಧವಾರದಿಂದ (ಡಿಸೆಂಬರ್ 17) ಟ್ರಯಲ್ ಆರಂಭ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ , ಪವಿತ್ರಾ ಗೌಡ ಮತ್ತು ಗ್ಯಾಂಗ್ ವಿರುದ್ಧ ಬುಧವಾರದಿಂದ (ಡಿಸೆಂಬರ್ 17) ಟ್ರಯಲ್ ಆರಂಭ ಆಗಲಿದೆ. ಸಾಕ್ಷ್ಯ ವಿಚಾರಣೆಗೆ ಪೂರ್ವ ಸಿದ್ಧತೆ ಆರಂಭಿಸಿರುವ ಪ್ರಾಸಿಕ್ಯೂಷನ್ ಇಂದು (ಡಿ.16) ಘಟನೆಯ ಸ್ಥಳ ಪರಿಶೀಲನೆ ನಡೆಸಿದೆ. ಮೊದಲ ಸಾಕ್ಷಿಗಳಾಗಿ ರೇಣುಕಾಸ್ವಾಮಿ ತಂದೆ, ತಾಯಿಗೆ ಸಮನ್ಸ್ ಜಾರಿಯಾಗಿದೆ. ಬುಧವಾರ ವಿಚಾರಣೆ ನಡೆಯಲಿದೆ. ಟ್ರಯಲ್​ಗೆ ಸಿದ್ಧತೆ ನಡೆದಿದೆ.

ಸಾಕ್ಷ್ಯ ವಿಚಾರಣೆಗೂ ಮುನ್ನ ಕೊಲೆಯ ಸ್ಥಳ ಪರಿಶೀಲನೆಗೆ ಮುಂದಾಗಿರುವ ಎಸ್​​ಪಿಪಿ ಪ್ರಸನ್ನ ಕುಮಾರ್, ಸಹಾಯಕ ಎಸ್​ಪಿಪಿ ಸಚಿನ್, ತನಿಖಾಧಿಕಾರಿ ಎಸಿಪಿ ಚಂದನ್ ಜೊತೆಗೂಡಿ ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಅಪಹರಿಸಿ ತಂದಿಟ್ಟಿದ್ದ ಶೆಡ್, ಹಲ್ಲೆ ನಡೆಸಿದ ಸ್ಥಳ, ಬಿಟ್ಟುಬಿಡುವಂತೆ ಕೈಮುಗಿದು ಬೇಡಿಕೊಂಡ ಸ್ಥಳ, ಕೊಲೆಯಾದ ನಂತರ ಶವ ಇಟ್ಟಿದ್ದ ಸ್ಥಳ, ನಂತರ ರಾತ್ರಿ ಶವ ಬಿಸಾಡಿದ ಸತ್ವ ಅಪಾರ್ಟ್​​ಮೆಂಟ್ ಬಳಿಯ ಸ್ಥಳ ಪರಿಶೀಲನೆ ನಡೆಸಲಾಗಿದೆ.

ಡಿ.17ಕ್ಕೆ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿರುವ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಮೊದಲಿಗೆ ಚಾರ್ಜ್ ಷೀಟ್​ನಲ್ಲಿ 7 ಮತ್ತು 8ನೇ ಸಾಕ್ಷಿಗಳಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಹಾಗೂ ತಾಯಿ ರತ್ನಪ್ರಭ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

ಬುಧವಾರ ಕೋರ್ಟ್​​ನಲ್ಲಿ ರೇಣುಕಾಸ್ವಾಮಿ ತಂದೆ ತಾಯಿ ಸಾಕ್ಷ್ಯ ವಿಚಾರಣೆ ಆಗಲಿದೆ. ರೇಣುಕಾಸ್ವಾಮಿ ಹಿನ್ನೆಲೆ, ಕೊನೆಯ ಭೇಟಿ ಬಗ್ಗೆ ವಿಚಾರಣೆ ಆಗಲಿದೆ. ಅಪಹರಣ, ಶವ ಪತ್ತೆ ಬಗ್ಗೆ ತಂದೆ ತಾಯಿ ವಿವರಿಸಲಿದ್ದಾರೆ. ಸಾಕ್ಷಿಗಳ ಪಾಟೀಸವಾಲಿಗೆ ಆರೋಪಿಗಳ ಪರ ವಕೀಲರು ಸಮಯ ಕೋರಲಿದ್ದಾರೆ. ಇಬ್ಬರ ಹೇಳಿಕೆ ಮುಕ್ತಾಯವಾದರೆ ಮತ್ತೆ ಕೆಲವು ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುವುದು.

272 ಸಾಕ್ಷಿಗಳಲ್ಲಿ ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಎಸ್​ಪಿಪಿ ನಡೆಸಲಿದ್ದಾರೆ. ಆರೋಪಿಗಳ ಪರ ವಕೀಲರು ಎಲ್ಲ ಸಾಕ್ಷಿಗಳನ್ನೂ ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ನಂತರ ಸಾಕ್ಷ್ಯದ ಬಗ್ಗೆ ಆರೋಪಿಗಳ ಹೇಳಿಕೆ ದಾಖಲು ಮಾಡಲಾಗುವುದು. ತಮ್ಮ ಸಾಕ್ಷ್ಯ ಒದಗಿಸಲು ಆರೋಪಿಗಳಿಗೆ ಅವಕಾಶ ನೀಡಲಾಗುತ್ತದೆ. ಅಂತಿಮವಾಗಿ ವಾದಮಂಡನೆ ಆಲಿಸಿ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಒಂದು ವರ್ಷ ಬೇಕಾಗಬಹುದು.

RELATED ARTICLES
- Advertisment -
Google search engine

Most Popular