ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ಬಾಕ್ಸಿಂಗ್ ಡೇ ಅಂದು ಅಂದರೆ ಡಿ.26 ರಂದು ಆರಂಭವಾದ ಈ ಪಂದ್ಯದ ಮೊದಲ ದಿನದಂದು ಉಭಯ ತಂಡಗಳಿಂದಲೂ ಅದ್ಭುತವಾದ ಪ್ರದರ್ಶನ ಕಂಡುಬಂದಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿತು. ಇದೀಗ ಆಸ್ಟ್ರೇಲಿಯಾ ಇಲ್ಲಿಂದ ತನ್ನ ಎರಡನೇ ಆಟವನ್ನು ಮುಂದವರೆಸಿದೆ. ಇತ್ತ ಆಸೀಸ್ ಪಡೆಯನ್ನು ಬೇಗನೇ ಆಲೌಟ್ ಮಾಡುವ ಇರಾದೆಯೊಂದಿಗೆ ಕಣಕ್ಕಿಳಿದಿರುವ ಟೀಂ ಇಂಡಿಯಾ ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಕಪ್ಪು ಪಟ್ಟಿ ಧರಿಸಿ ಅಖಾಡಕ್ಕಿಳಿದಿದೆ.
ಮನಮೋಹನ್ ಸಿಂಗ್ ನಿಧನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಮನಮೋಹನ್ ಸಿಂಗ್ ಅವರನ್ನು ಗುರುವಾರ ರಾತ್ರಿ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ. ಅದೇ ರಾತ್ರಿ 9:51ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರ ನಿಧನದಿಂದ ನಾಡಿನಾದ್ಯಂತ ಶೋಕ ಮಡುಗಟ್ಟಿದ್ದು, ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದಾರೆ.
2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಂತರ ಸುದೀರ್ಘ ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ್ದ ಭಾರತದ ನಾಲ್ಕನೇ ಪ್ರಧಾನಿ ಎನಿಸಿಕೊಂಡಿದ್ದರು. ಅಲ್ಲದೆ ಡಾ. ಮನಮೋಹನ್ ಸಿಂಗ್ ಅವರು ಭಾರತದ ಮೊದಲ ಸಿಖ್ ಪ್ರಧಾನಿಯೂ ಆಗಿದ್ದು, ಜವಾಹರಲಾಲ್ ನೆಹರು ಅವರ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮತ್ತೆ ಮರು ಆಯ್ಕೆಯಾದ ಮೊದಲ ಪ್ರಧಾನಿ ಕೂಡ ಆಗಿದ್ದರು.
ಸಂತಾಪ ಸೂಚಿಸಿದ ಮಾಜಿ ಕ್ರಿಕೆಟಿಗರು
ಇನ್ನು ಅಗಲಿದ ಚೇತನಕ್ಕೆ ಟೀಂ ಇಂಡಿಯಾದ ಹಲವು ಮಾಜಿ ಆಟಗಾರರು ಸಂತಾಪ ಸೂಚಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿರುವ ವಿರೇಂದ್ರ ಸೆಹ್ವಾಗ್, ‘ನಮ್ಮ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ನಿಧನಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ’ ಎಂದು ಬರೆದುಕೊಂಡಿದ್ದಾರೆ.
ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕೂಡ ಸಂತಾಪ ಸೂಚಿಸಿದ್ದು, ‘ಡಾ. ಮನಮೋಹನ್ ಸಿಂಗ್ ಅವರ ನಿಧನದ ದುಃಖದ ಸುದ್ದಿ. ಭಾರತದ ಪ್ರಗತಿಗಾಗಿ ಅವಿರತವಾಗಿ ಶ್ರಮಿಸಿದ ದೂರದೃಷ್ಟಿಯ ನಾಯಕ ಮತ್ತು ನಿಜವಾದ ರಾಜಕಾರಣಿ. ಅವರ ಬುದ್ಧಿವಂತಿಕೆ ಮತ್ತು ನಮ್ರತೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರ ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.