ರುಚಿಕರವಾದ ಚಿಕನ್ ಕಟ್ಲೆಟ್ ಮಾಡುವ ವಿಧಾನ…
ಬೇಕಾಗುವ ಪದಾರ್ಥಗಳು…
ಬೋನ್ ಲೆಸ್ ಚಿಕನ್– 200 ಗ್ರಾಂ, ಎಣ್ಣೆ– ಅಗತ್ಯವಿರುವಷ್ಟು, ಬೆಳ್ಳುಳ್ಳಿ ಎಸಳು– 5, ಹಸಿಮೆಣಸಿನಕಾಯಿ– 4
ಈರುಳ್ಳಿ– 1, ಕಾಳು ಮೆಣಸಿನಪುಡಿ- ಕಾಲು ಚಮಚ, ಅರಿಶಿಣಪುಡಿ- ಕಾಲು ಚಮಚ, ಅಚ್ಚಖಾರದಪುಡಿ- ಅರ್ಧ ಚಮಚ, ಗರಂಮಸಾಲ- ಕಾಲು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಮೈದಾಹಿಟ್ಟು- 4 ಚಮಚ, ಕಾರ್ನ್ ಫ್ಲೋರ್- 2 ಚಮಚ, ಬ್ರೆಡ್ ಕ್ರಮ್ಸ್– ಅರ್ಧ ಬಟ್ಟಲು,ಕೊತ್ತಂಬರಿಸೊಪ್ಪು– ಸ್ವಲ್ಪ, ಮೊಟ್ಟೆ– ಅರ್ಧ
ಮಾಡುವ ವಿಧಾನ…
ಮೊದಲಿಗೆ ಬೋನ್ ಲೆಸ್ ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಇದನ್ನು ಸ್ವಲ್ಪ ನುಣ್ಣಗೆ ರುಬ್ಬಿಕೊಳ್ಳಬೇಕು.
ಸ್ಟೌವ್ ಮೇಲೆ ಬಾಣಲಿ ಇಟ್ಟು ಇದಕ್ಕೆ 2 ಟೀ ಸ್ಪೂನ್ ಎಣ್ಣೆ ಹಾಕಬೇಕು. ಎಣ್ಣೆ ಕಾದ ಬಳಿಕ ಸಣ್ಣದಾಗಿ ಹಚ್ಚಿರುವ ಬೆಳ್ಳುಳ್ಳಿ ಪೀಸ್ ಗಳು, ಸಣ್ಣದಾಗಿ ಕಟ್ ಮಾಡಿರುವ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಸಣ್ಣದಾಗಿ ಕಟ್ ಮಾಡಿರುವ 1 ಈರುಳ್ಳಿಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಬೇಕು.
ಈರುಳ್ಳಿ ಸ್ವಲ್ಪ ಮೆತ್ತಗೆ ಆದ ಮೇಲೆ ಚಿಕನ್ ಪೇಸ್ಟ್ ಅನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳುತ್ತಾ, ಇದಕ್ಕೆ ಕಾಲು ಟೀ ಸ್ಪೂನ್ ಕರಿಮೆಣಸಿನಪುಡಿ, ಕಾಲು ಟೀ ಸ್ಪೂನ್ ಅರಿಶಿಣಪುಡಿ, ಅರ್ಧ ಟೀ ಸ್ಪೂನ್ ಅಚ್ಚಖಾರದಪುಡಿ, ಕಾಲು ಟೀ ಸ್ಪೂನ್ ಗರಂಮಸಾಲ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿಕೊಳ್ಳಬೇಕು. ಚಿಕನ್ ನಲ್ಲಿ ಸ್ವಲ್ಪ ತೇವಾಂಶವಿರುವಾಗಲೇ ಸ್ಟೌವ್ ಆಫ್ ಮಾಡಿಕೊಂಡು ಚಿಕನ್ ಮಿಶ್ರಣ ತಣ್ಣಗಾಗಲು ಬಿಡಬೇಕು.
ಕುಕ್ಕರ್ ನಲ್ಲಿ 2 ಆಲೂಗಡ್ಡೆಯನ್ನು ಹಾಕಿ ಬೇಯಿಸಿಕೊಂಡು, ಸಿಪ್ಪೆ ತೆಗೆದು ನುಣ್ಣದೆ ಮಾಡಿಕೊಳ್ಳಬೇಕು. ಮ್ಯಾಶ್ ಮಾಡಿರುವ ಆಲೂಗಡ್ಡೆಯನ್ನು ತಣ್ಣಗಾದ ಚಿಕನ್ ಮಿಶ್ರಣಕ್ಕೆ ಹಾಕಿ, ಇದರ ಜೊತೆಗೆ 2 ಚಮಚ ಮೈದಾಹಿಟ್ಟು, 1 ಚಮಚ ಕಾರ್ನ್ ಫ್ಲೋರ್, ಕಾಲು ಕಪ್ ಬ್ರೆಡ್ ಕ್ರಮ್ಸ್, ಸಣ್ಣದಾಗಿ ಹಚ್ಚಿರುವ ಕೊತ್ತಂಬರಿಸೊಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕಟ್ಲೆಟ್ ಮಿಶ್ರಣ ರೆಡಿ ಮಾಡಿಕೊಳ್ಳಬೇಕು. ನಂತರ ಉಂಡೆ ಮಾಡಿಕೊಂಡು ಕಟ್ಲೆಟ್ ಆಕಾರಕ್ಕೆ ತಟ್ಟಿಕೊಳ್ಳಬೇಕು.
ಒಂದು ಬೌಲ್ ನಲ್ಲಿ 2 ಚಮಚ ಮೈದಾಹಿಟ್ಟು, 2 ಟೀ ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಮೊಟ್ಟೆ, ಸ್ವಲ್ಪ ನೀರು, ಸ್ವಲ್ಪ ಉಪ್ಪನ್ನು ಹಾಕಿ ಇದನ್ನು ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ಈ ಪೇಸ್ಟ್ ನಲ್ಲಿ ಕಟ್ಲೆಟ್ ಅನ್ನು ಹಾಕಿ ಮುಳುಗಿಸಿ, ತೆಗೆದು, ಒಂದು ತಟ್ಟೆಯಲ್ಲಿ ಬ್ರೆಡ್ ಕ್ರಮ್ಸ್ ಹಾಕಿ ಅದರಲ್ಲಿ ಮುಳುಗಿಸಿ ಕಟ್ಲೆಟ್ ಅನ್ನು ತೆಗೆಯಬೇಕು.
ಸ್ಟೌವ್ ಮೇಲೆ ಬಾಣಲಿ ಇಟ್ಟು ಕರಿಯಲು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ, ಕಟ್ಲೆಟ್ ಅನ್ನು ಎರಡೂ ಸೈಡ್ ಕರಿದುಕೊಂಡರೆ ರುಚಿಕರವಾದ ಚಿಕನ್ ಕಟ್ಲೆಟ್ ಸವಿಯಲು ಸಿದ್ಧವಾಗುತ್ತದೆ.