Saturday, April 19, 2025
Google search engine

Homeಸ್ಥಳೀಯಕ್ಷಯ ರೋಗ ಮಾರಕವಾದ ರೋಗ ಚಿಕಿತ್ಸೆ ಅಗತ್ಯ : ಶಾಸಕ ಪಿ. ರವಿಕುಮಾರ್

ಕ್ಷಯ ರೋಗ ಮಾರಕವಾದ ರೋಗ ಚಿಕಿತ್ಸೆ ಅಗತ್ಯ : ಶಾಸಕ ಪಿ. ರವಿಕುಮಾರ್


ಮಂಡ್ಯ: ಕ್ಷಯ ರೋಗ ಒಂದು ಮಾರಕವಾದ ರೋಗವಾಗಿದ್ದು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಗುಣಪಡಿಸಬಹುದಾಗಿದೆ ಎಂದು ಮಂಡ್ಯ ಜಿಲ್ಲೆಯ ಶಾಸಕ ಪಿ. ರವಿಕುಮಾರ್ ಅವರು ತಿಳಿಸಿದರು.
ಅವರು ಇಂದು ಡವರಿ ಸಮಾಜ ಸ್ಲಂ ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಡ್ಯ ಜಿಲ್ಲೆಯಾದ್ಯಂತ ಜುಲೈ ೧೭ ರಿಂದ ಆಗಸ್ಟ್ ೨ರವರೆಗೆ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕ್ಷಯ ರೋಗ ಕಂಡುಬರುವ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಸರ್ಕಾರದಿಂದ ನೀಡಲಾಗುವುದು ಜೊತೆಗೆ ೫೦೦ ರೂ ಮತ್ತು ಫುಡ್ ಕಿಟ್ ವಿತರಿಸಲಾಗುವುದು ಇದರ ಸದುಪಯೋಗವನ್ನು ಮಂಡ್ಯ ಜನತೆ ಪಡೆದುಕೊಳ್ಳಬೇಕೆಂದರು.
ಸತತವಾಗಿ ಎರಡು ವಾರದಿಂದ ಕೆಮ್ಮು ಬರುತ್ತಿದ್ದರೆ ಅಥವಾ ಅದು ನಿಂತಿಲ್ಲದಿದ್ದರೆ ಕಫ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಈ ರೋಗವನ್ನು ಹೋಗಲಾಡಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಕ್ಷಯ ರೋಗ ಅಧಿಕಾರಿಗಳು ತುಂಬಾ ಶ್ರಮಪಡುತ್ತಿದ್ದಾರೆ ಅವರಿಗೆ ಸಾರ್ವಜನಿಕರು ಸಹಕರಿಸಿ ಮಂಡ್ಯ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.
ಜಿಲ್ಲೆಯಲ್ಲಿ ೧೮ ಲಕ್ಷ ಜನರು ವಾಸವಿದ್ದು ಅದರಲ್ಲಿ ೩,೩೮,೦೦೦ ಜನರ ಸ್ಯಾಂಪಲ್ ಅನ್ನು ತೆಗೆದುಕೊಳ್ಳಲಾಗಿದೆ ಎಂದರು.
ಕಫ ಪರೀಕ್ಷೆಯನ್ನು ಕೆಲಸಕ್ಕಾಗಿ ವಲಸೆ ಬರುವ ಜನರು ಇರುವ ಪ್ರದೇಶದಲ್ಲಿ, ಹೈರಿಸ್ಕ್ ಪ್ರದೇಶದಲ್ಲಿ ಕೇಸ್ ಇರುವ ಕಡೆ ಎಲ್ಲ ಮನೆ ಮನೆಗೂ ಹೋಗಿ ರೋಗ ಲಕ್ಷಣದ ಬಗ್ಗೆ ಅಲ್ಲಿನ ಜನಸಾಮಾನ್ಯರ ಜೊತೆ ವಿಚಾರಿಸಲಾಗುತ್ತಿದೆ ಎಂದು ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಎಂ ಎನ್ ಆಶಾಲತಾ ರವರು ತಿಳಿಸಿದರು.
ಕ್ಷಯ ರೋಗದ ಬಗ್ಗೆ ಪರೀಕ್ಷೆ ನಡೆಸಲು ಜಿಲ್ಲಾದ್ಯಂತ ೩೧೫ ಆರೋಗ್ಯ ಅಧಿಕಾರಿಗಳ ಗುಂಪು ರಚನೆ ಮಾಡಲಾಗಿದೆ ಎಂದರು. ಕ್ಷಯ ರೋಗದ ಲಕ್ಷಣ ಇದ್ದರೆ ಅವರೇ ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಕಫ ಸಂಗ್ರಹಣೆ ಮಾಡಿ ಪರೀಕ್ಷೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ ಮೋಹನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜವರೇಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಆರ್ ಶಶಿಧರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಗಳ, ನಗರಸಭಾ ಸದಸ್ಯ ನಾಗೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular