ತುಮಕೂರು: ಕಳೆದ ಒಂದು ವಾರದ ಹಿಂದೆ ಮಿಡಿಗೇಶಿ ಪೊಲೀಸ್ ಠಾಣೆ ಪೇದೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಆಂಧ್ರಪ್ರದೇಶದ ಅನಂತಪುರದ ಸನ್ನಿಧಾನದಲ್ಲಿ ಪತ್ತೆಯಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ತುಮಕೂರು ಜಿಲ್ಲೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡ್ತಿದ್ದ. ಹಾವೇರಿ ಮೂಲದ ವಿರೇಶ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ.
ಇದೇ ತಿಂಗಳ 22, 23 ರಂದು ವೀರೇಶ್ ನ ಮದುವೆ ಸಹ ಫಿಕ್ಸ್ ಆಗಿತ್ತು. ವಾರದ ಹಿಂದೆ ಮಿಡಿಗೇಶಿ ಠಾಣೆಯಲ್ಲಿ ಕೆಲಸ ಮುಗಿಸಿ ನಾಪತ್ತೆಯಾಗಿದ್ದ. ಬಳಿಕ ಕೆರೆ ಏರಿಯ ಬಳಿ ಮೊಬೈಲ್, ಬೈಕ್ ಹಾಗೂ ಬಟ್ಟೆ ಬಿಚ್ಚಿಟ್ಟು ವೀರೇಶ್ ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ. ಅಂದಿನಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಕೆರೆ, ಕಟ್ಟೆ, ಬಾವಿ ಹಾಗೂ ಅರಣ್ಯ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಕೌಟುಂಬಿಕ ಕಲಹಕ್ಕೆ ಮನನೊಂದು ಹೋಗಿರುವುದಾಗಿ ತಪ್ಪೊಪ್ಪಿಕೊಂಡ ಪೊಲೀಸ್ ಸಿಬ್ಬಂದಿ ವಿರೇಶ್‌ನನ್ನು ಆಂದ್ರಪ್ರದೇಶದ ಅನಂತಪುರದಿಂದ ಮಿಡಿಗೇಶಿ ಪೊಲೀಸರು ಕರೆ ತಂದಿದ್ದಾರೆ.