Saturday, January 31, 2026
Google search engine

Homeಅಪರಾಧತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ ಕುಮಾರ್ ಲೋಕಾಯುಕ್ತ ಬಲೆಗೆ

ತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ ಕುಮಾರ್ ಲೋಕಾಯುಕ್ತ ಬಲೆಗೆ

ತುಮಕೂರು : ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ಚುರುಕಿನ ಕಾರ್ಯಾಚರಣೆ ಮುಂದುವರಿದಿದ್ದು, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಂದು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಕಾರನ್ನು ವಾಪಸ್ ನೀಡುವ ನೆಪದಲ್ಲಿ ಪಿಎಸ್‌ಐ ಚೇತನ ಕುಮಾರ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಮೊದಲ ಹಂತವಾಗಿ 40 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಅವರನ್ನು ಬಂಧಿಸಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿದ ಲೋಕಾಯುಕ್ತ ತಂಡ, ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದೆ. ಸರ್ಕಾರಿ ಕಚೇರಿಯಲ್ಲೇ ಲಂಚ ಸ್ವೀಕಾರ ನಡೆದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಡ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಚೀಟಿ ವ್ಯವಹಾರ ಸಂಬಂಧಿತ ಪ್ರಕರಣದಲ್ಲಿ ವ್ಯಕ್ತಿಯನ್ನು ಕೇಸ್‌ನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಒಟ್ಟು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಅವರ ಮೇಲಿದ್ದು, ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ 4 ಲಕ್ಷ ರೂ. ಲಂಚ ಪಡೆಯುವಾಗ ಅವರನ್ನು ಬಂಧಿಸಲಾಗಿತ್ತು.

ಸತತವಾಗಿ ಪೊಲೀಸ್ ಅಧಿಕಾರಿಗಳೇ ಲೋಕಾಯುಕ್ತ ಬಲೆಗೆ ಬೀಳುತ್ತಿರುವ ಘಟನೆಗಳು ಪೊಲೀಸ್ ಇಲಾಖೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾರ್ವಜನಿಕರ ವಿಶ್ವಾಸ ಕಾಪಾಡಬೇಕಾದ ಅಧಿಕಾರಿಗಳೇ ಲಂಚದ ದಂಧೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ ಕುಮಾರ್ ವಿರುದ್ಧ ಕಾನೂನು ಕ್ರಮ ಮುಂದುವರಿಸಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ.

RELATED ARTICLES
- Advertisment -
Google search engine

Most Popular