ತುಮಕೂರು: ಯುವತಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ತುಮಕೂರಿನ ವಿದ್ಯಾನಗರದ 10 ನೇ ಕ್ರಾಸ್ ನಲ್ಲಿ ನಡೆದಿದೆ.
ವೀಣಾ (24) ಕೊಲೆಯಾದ ಯುವತಿ.
ಯುವತಿ ವೀಣಾ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಾಸಿಹಳ್ಳಿ ಗ್ರಾಮದವಳಾಗಿದ್ದಾಳೆ.
ಕಳೆದ ಎರಡು ವರ್ಷದಿಂದ ತುಮಕೂರಿನ ಇನ್ ಕ್ಯಾಪ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು.
ತುಮಕೂರಿನ ವಿದ್ಯಾನಗರದ 10 ನೇ ಕ್ರಾಸ್ ಬಳಿ ತನ್ನ ಇಬ್ಬರು ಸ್ನೇಹಿತೆಯರ ಜೊತೆ ವಾಸವಿದ್ದರು.

ನಿನ್ನೆ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ವೀಣಾ. ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ವಾಪಸ್ ಆಗಿದ್ದರು. ರಾತ್ರಿ ಮನೆಯಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾರೆ. ಆಕೆಯ ಸ್ನೇಹಿತೆಯರು ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ತುಮಕೂರಿನ ಎನ್ ಇಪಿಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಎನ್ ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.