ಕೊಪ್ಪಳ/ಬಳ್ಳಾರಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ದಿನಗಳೊಳಗೆ ಗೇಟ್ ರಿಪೇರಿ ಮಾಡಿ ಕೊಡುವುದಾಗಿ ಸರ್ಕಾರಕ್ಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಭಾನುವಾರ ಸಂಜೆ ಆಂಧ್ರಪ್ರದೇಶ ಹಾಗೂ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿದೆ. ಎಲ್ಲಾ ಕ್ರಸ್ಟ್ ಗೇಟ್ ತೆರೆದ ಪರಿಣಾಮ ಸುತ್ತಮುತ್ತಲಿನ ಸೇತುವೆಗಳ ಪ್ರವೇಶ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಅಪಾರ ಪ್ರಮಾಣದ ನೀರು ಹೊರಗಡೆ ಹೋಗುವುದನ್ನು ಹಾಗೂ ವೀಕ್ಷಣೆ ಮಾಡಲು ಜನರು ಕಿರು ಸೇತುವೆ ಸೇರಿದಂತೆ ಮುಖ್ಯ ಸೇತುವೆಗಳ ಮೇಲೆ ನಿಲ್ಲುತ್ತಿದ್ದರು. ಅಲ್ಲದೇ ನದಿಯ ಸೇತುವೆಯ ಮೇಲೆ ಸಹ ಜನರು ಹುಚ್ಚಾಟ ಮೆರೆಯುತ್ತಿದ್ದರು. ನಿನ್ನೆ ಡಿಸಿಎಂ ಡಿಕೆ. ಶಿವಕುಮಾರ್ ಅವರ ಸೂಚನೆಯಂತೆ ವಿಜಯನಗರ ಡಿಸಿ ಎಂಎಸ್ ದಿವಾಕರ್ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮುಂದಿರುವ ಆಯ್ಕೆಗಳೇನು?
ಐದು ದಿನಗಳಲ್ಲಿ ಗೇಟ್ ರಿಪೇರಿ ಮಾಡುವುದಕ್ಕೆ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಆರಂಭದಲ್ಲಿ 25 ಟಿಎಂಸಿ ನೀರು ಬಿಟ್ಟು, ಗೇಟ್ ಕೂಡಿಸಲು ಪ್ರಯತ್ನ ಮಾಡವುದು. ಈ ಪ್ರಯತ್ನ ವಿಫಲವಾದರೆ 40 ಟಿಎಂಸಿ ನೀರು ಹೊರಕ್ಕೆ ಬಿಡುವುದು.
ಈ ಪ್ರಯತ್ನವೂ ಆಗದೇ ಇದ್ದರೆ ಅಂತಿಮವಾಗಿ 60 ಟಿಎಂಸಿ ನೀರು ಖಾಲಿ ಮಾಡಲಾಗುತ್ತದೆ. 60 ಟಿಎಂಸಿ ನೀರು ಖಾಲಿ ಮಾಡಿದರೆ ಗೇಟ್ ಅನ್ನು ಸುಲಭವಾಗಿ ಹಾಕಬಹುದು.
ಈಗಾಗಲೇ ತಜ್ಞರ ಮೂಲಕ ಸಭೆ ನಡೆಸಿ, ಚರ್ಚೆ ನಡೆಸಿರುವ ಅಧಿಕಾರಿಗಳು ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವು ಹೆಚ್ಚಿಸಲು ತೀರ್ಮಾನ ಮಾಡಲಾಗುತ್ತಿದೆ. ಎಂಥಹದ್ದೇ ಪರಿಸ್ಥಿತಿ ಎದುರಾದರೂ ಐದು ದಿನಗಳಲ್ಲಿ ಗೇಟ್ ರಿಪೇರಿ ಮುಗಿಸಿ, ಜನರಿಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಶತ ಪ್ರಯತ್ನ ಮಾಡಲಾಗುತ್ತಿದೆ.