ಚಾಮರಾಜನಗರ : ಕರ್ನಾಟಕ-ಕೇರಳ ಸಂಪರ್ಕಿಸುವ ಬಂಡೀಪುರ ಪ್ರದೇಶದಲ್ಲಿ ರಾತ್ರಿ ಪ್ರಯಾಣ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಬಂಡೀಪುರ ಅರಣ್ಯ ಮಾರ್ಗಕ್ಕೆ ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಸಂಬಂಧ ವರದಿ ನೀಡಲು ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಈ ಕುರಿತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಪ್ರಯಾಣಕ್ಕೆ ಕರ್ನಾಟಕ ತಡೆ ನೀಡಿತ್ತು. ಇದರಿಂದ ಕೇರಳ ಪ್ರಯಾಣಿಕರಿಗೆ ತೊಂದರೆ ಎಂದು ವಾದ ಮಂಡನೆಯಾಗಿತ್ತು. ಈ ಹಿನ್ನಲೆ ಸುರಂಗ ಮಾರ್ಗಕ್ಕೆ ಕೇರಳ ಸರ್ಕಾರ ಪ್ಲ್ಯಾನ್ ಮಾಡಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನಕ್ಕೆ ಸಮಿತಿ ರಚನೆ ಮಾಡಿದೆ. ಪ್ರಿಯಾಂಕಾ ಗಾಂಧಿಗೆ ಗಡ್ಕರಿ ಮಾಹಿತಿ ನೀಡಿದ್ದಾರೆ ಎಂದು ಕೇರಳ ಕಾಂಗ್ರೆಸ್ ತಿಳಿಸಿದೆ. ಟನಲ್ ಜೊತೆಗೆ ವಯನಾಡಿನ ನಾಲ್ಕು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಿಂದ 105 ಕೋಟಿ ರೂ. ಅನುಮೋದಿಸಲಾಗಿದೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ.
ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮುಂದುವರೆಸಲು ಸಫಾರಿಗಳನ್ನು ಶೀಘ್ರವಾಗಿ ತೆರೆಯುವಂತೆ ಪ್ರವಾಸೋದ್ಯಮ ವಲಯದ ಒತ್ತಡದ ನಡುವೆ, ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಗಳನ್ನು ಪುನರಾರಂಭಿಸುವ ಕುರಿತು ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯು ಮಧ್ಯಂತರ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.



