ಗುಂಡ್ಲುಪೇಟೆ: ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣವನ್ನು ವಾಪಸ್ ನೀಡುವಂತೆ ರೈತರು ಪಟ್ಟು ಹಿಡಿದು ನಡೆಸುತ್ತಿರುವ ಪ್ರತಿಭಟನಾ ಧರಣಿ ಎರಡನೇ ದಿನ ಮಂಗಳವಾರವೂ ಮುಂದುವರೆದಿದೆ.
ಪಟ್ಟಣದ ಹೊರ ವಲಯದ ಉಗ್ರಾಣ ನಿಗಮದ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿರುವ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಅರಿಶಿಣ ಬೆಳೆಗಾರರು ಸರ್ಕಾರ ಹಾಗೂ ಅಧಿಕಾರಿಗಳು ಮತ್ತು ರಾಜ್ಯ ಸಹಕಾರ ಮಾರಾಟ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಅರಿಶಿಣ ಬೆಳೆಗಾರರ ಸಂಘದ ಪ್ರತಿನಿಧಿ ನಾಗಾರ್ಜುನ್ ಮಾತನಾಡಿ, ಖರೀದಿ ಕೇಂದ್ರ ಮೂಲಕ ಖರೀದಿ ಮಾಡಿರುವ ಅರಿಶಿಣದ ಹಣವನ್ನು ಮೂರು ದಿನದೊಳಗೆ ರೈತರ ಖಾತೆಗೆ ಜಮೆ ಮಾಡಬೇಕು ಎಂಬ ನಿಯಮವಿದೆ. ಹೀಗಿದ್ದರೂ ಕೂಡ ಅರಿಶಿಣ ಖರೀದಿಸಿ 40 ದಿನ ಕಳೆದರು ಖಾತೆಗೆ ಹಣ ಜಮೆ ಆಗಿಲ್ಲ. ಆದ್ದರಿಂದ ರೈತರ ಬಳಿ ಖರೀದಿ ಮಾಡಿರುವ ಅರಿಶಿಣವನ್ನು ಕೂಡಲೇ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ಕೂಡಲೇ ಅರಿಶಿಣವನ್ನು ರೈತರಿಗೆ ವಾಪಸ್ ಕೊಡಿಸಲು ಕ್ರಮ ವಹಿಸಬೇಕೆಂದು ಧರಣಿ ನಿರತ ರೈತರು ಒತ್ತಾಯಿಸಿದರು. ಜೊತೆಗೆ ಸಮಸ್ಯೆ ಕೂಡಲೇ ಬಗೆ ಹರಿಯದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿನಿತ್ಯ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಸ್ಥಳದಲ್ಲೆ ತಯಾರಿಸಿ ಸೇವಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡರಾದ ಕುಂದಕೆರೆ ಸಂಪತ್ತು, ದಡದಹಳ್ಳಿ ಮಹೇಶ್, ರಾಜಪ್ಪ, ಕಂದೇಗಾಲ ಮಾದಪ್ಪ ಸೇರಿದಂತೆ ಹಲವು ಮಂದಿ ರೈತ ಮುಖಂಡರು ಹಾಜರಿದ್ದರು.