ತುಮಕೂರು: ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸೇನೆ ಹಾಗೂ ಹಸಿರು ಸೇನೆ ವತಿಯಿಂದ ತುರುವೇಕೆರೆ ಬಂದ್ ಗೆ ಕರೆ ನೀಡಲಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ರೈತ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.
ತುಮಕೂರು ಜಿಲ್ಲೆ ಅತೀ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯಾಗಿದೆ. ಆದರೆ 18 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ ಬೆಲೆ ಇದೀಗ 7500 ರೂಪಾಯಿಗೆ ಕುಸಿದಿದೆ. ನಫೆಡ್ ನಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ತಕ್ಷಣವೇ ನಫೆಡ್ ನಲ್ಲಿ ಕೊಬ್ಬರಿ ಖರೀದಿಯನ್ನು ಆರಂಭಿಸಬೇಕು. ಕೊಬ್ಬರಿಗೆ ಕೇಂದ್ರ ಸರ್ಕಾರ ಕೇವಲ 11,750 ರೂ ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದು ನ್ಯಾಯ ಸಮ್ಮತವಾದ ಬೆಲೆ ಅಲ್ಲ. ನುಸಿ ಪೀಡೆ, ಕಾಂಡ ಕೊರೆತ, ಅತಿವೃಷ್ಟಿ, ಅನಾವೃಷ್ಟಿಯಿಂದ ಇಳುವರಿ ಕುಂಠಿತವಾಗಿದೆ. ಈಗ ಬೆಲೆ ಕುಸಿತದಿಂದ ರೈತ ಮತ್ತಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಹೀಗಾಗಿ ಕನಿಷ್ಠ 20 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ರೈತ ಮುಖಂಡರಾದ ಸತೀಶ್ ಕೆಂಕೆರೆ, ಧನಂಜಯಾರಾಧ್ಯ ಸೇರಿ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.