ಉಡುಪಿ: ಮುಸ್ಲಿಮ್ ವಿದ್ಯಾರ್ಥಿನಿಯರ ವಿರುದ್ಧ ಸುಳ್ಳು ಆರೋಪ: ಮೊಬೈಲ್ ಪರೀಕ್ಷಿಸಿದಾಗ ಯಾವುದೇ ವೀಡಿಯೋ ಇರಲಿಲ್ಲ ಎಂದ ಎಸ್ಪಿ
ಉಡುಪಿ: ಖಾಸಗಿ ಕಾಲೇಜೊಂದರ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಎಸ್ ಪಿ ಅಕ್ಷಯ್ ಮಚೀಂದ್ರ ಹಾಕೆ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು ಎಂದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಡನ್ ಕ್ಯಾಮೆರಾ ಅಥವಾ ಅಂತಹ ಯಾವುದೇ ಸಾಧನ ಬಳಸಿರುವ ಯಾವುದೇ ಕುರುಹು ಕಂಡುಬಂದಿಲ್ಲ. ಇಂತಹ ಫೋಟೊ, ವೀಡಿಯೋಗಳನ್ನು ಸೆರೆಹಿಡಿದು ಬ್ಲಾಕ್ ಮೇಲ್ ಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳನ್ನೂ ಹಬ್ಬಿಸಲಾಗುತ್ತಿದೆ. ಆದರೆ ಇಲ್ಲಿಯ ತನಕ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೆ ನಾವೂ ನಿಗಾ ಇಟ್ಟಿದ್ದು ನಮಗೂ ಯಾವುದೇ ವಿಡಿಯೋ ಲಭ್ಯವಾಗಿಲ್ಲ. ಕೆಲವರು ಬೇರೆ ಕಡೆ ಆದ ವಿಡಿಯೋಗಳಿಗೆ ಧ್ವನಿ ಎಡಿಟ್ ಮಾಡಿ ಉಡುಪಿ ಘಟನೆ ಎಂದು ಬಿಂಬಿಸುವ ಪ್ರಸಂಗ ನಡೆದಿದ್ದು, ಅದಕ್ಕೆ ನಾವು ಸ್ಪಷ್ಟನೆ ನೀಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶ ತಿಳಿಯದೆ ಸುಮ್ಮನೆ ಮಾಹಿತಿ ಹರಡುವುದರಿಂದ ಜನರಿಗೆ ಗೊಂದಲ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.
ಯಾವುದೇ ಎಫ್ ಐಆರ್ ಅಥವಾ ಯಾವುದೇ ದೂರು ದಾಖಲಾಗಿಲ್ಲ. ನಾವು ಸುಮೋಟೋ ಕೇಸು ದಾಖಲಿಸಲು ಸಾಮಾಜಿಕ ಜಾಲತಾಣದಿಂದ ಯಾವುದೇ ಸಾಕ್ಷಿ ದಾಖಲೆಗಳು ಸಿಕ್ಕಿಲ್ಲ. ಮೊಬೈಲ್ ಪರಿಶೀಲನೆ ಮಾಡಲಾಗಿದೆ, ಅದರಲ್ಲಿಯೂ ಏನೂ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು.