ದಾವಣಗೆರೆ: ವಕ್ಫ್ ತಿದ್ದುಪಡಿ ಮಸೂದೆ – 2025 ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವೀಡಿಯೊ clip ನಲ್ಲಿ ವ್ಯಕ್ತಿಯೊಬ್ಬನು ವಿವಾದಾಸ್ಪದ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ ದೃಶ್ಯಗಳು ವೈರಲ್ ಆಗಿದ್ದವು. ಈ ವೀಡಿಯೊ ಆಧರಿಸಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಜಾದ್ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ನೇತೃತ್ವದಲ್ಲಿ, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡವನ್ನು ರಚಿಸಿ ಆರೋಪಿಗಳ ಹುಡುಕಾಟ ಆರಂಭಿಸಲಾಯಿತು. ತನಿಖೆಯ ಭಾಗವಾಗಿ ಬಾಷಾನಗರ ನಿವಾಸಿ ಅಬ್ದುಲ್ ಗನಿ (56) ಮತ್ತು ಮೊಹಮ್ಮದ್ ಜುಬೈರ್ (40) ಎಂಬವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಅಹ್ಮದ್ ಕಬೀರ್ ಖಾನ್ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.
ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಸಿಬ್ಬಂದಿ ತೋರಿದ ಕಾರ್ಯಕ್ಷಮತೆಗೆ ಎಸ್‌ಪಿ ಉಮಾ ಪ್ರಶಾಂತ್ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ “ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್‌ಗಳು, ಮತ್ತು ಯಾವುದೇ ರೀತಿಯ ಪ್ರಚೋದನಕಾರಿ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದು ಕಾನೂನುಬಾಹಿರ. ಇಂತಹ ಕ್ರಿಯೆಗಳಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.”ಎಂದು ಹೇಳಿದರು.
ಸಾಮಾಜಿಕ ಮಾಧ್ಯಮ ಬಳಕೆದಾರರು ಜವಾಬ್ದಾರಿಯಿಂದ ವರ್ತಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.