ಮಹಾರಾಜ್‍ಗಂಜ್ (ಯುಪಿ): ಮಹಾರಾಜ್‍ಗಂಜ್ ಜಿಲ್ಲೆಯ ನೌತನ್ವಾ ಪ್ರದೇಶದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ 1.8 ಕೋಟಿ ರೂಪಾಯಿ ಮೌಲ್ಯದ 108 ಗ್ರಾಂ ಹೆರಾಯಿನ್ ಮಾದಕವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಪಾಚು (48) ಮತ್ತು ದುರ್ಗೇಶ್ ಶಹನಿ (45) ನೌತನ್ವಾ ಎಂದು ಗುರುತಿಸಲಾಗಿದೆ.
ಇಂಟರ್ ಕಾಲೇಜು ಬಳಿ ತಿರುಗುತ್ತಿದ್ದಾಗ ಅನುಮಾನದ ಮೇಲೆ ಪೊಲೀಸರು ತಡೆದು ಇಬ್ಬರನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿತ್ತು. ಗ್ಯಾಂಗ್‍ನ ಮತ್ತೊಬ್ಬ ಸದಸ್ಯ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಮತ್ತು ಆತನನ್ನು ಹಿಡಿಯಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ನೌತನ್ವಾ ಅನುಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಚಟ ಬೆಳೆಸಿ ಅವರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಮಾದಕ ದ್ರವ್ಯಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.