ಗಂಜಾಂ (ಒಡಿಶಾ): ಎರಡು ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ಗಂಜಾಂ ಜಿಲ್ಲೆಯ ದಿಗ್ಪಹಂಡಿಯ ಡೆಂಗೋಸ್ಟಾ ಪ್ರದೇಶದಲ್ಲಿ ಸಂಭವಿಸಿದೆ.
ರಾಯಗಢ ಜಿಲ್ಲೆಯ ಗುಡಾರಿ ಪ್ರದೇಶದಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (OSRTC) ಬಸ್ ಹಾಗೂ ಬೆರ್ಹಾಮ್‌ಪುರ ಪ್ರದೇಶದ ಖಂಡೇಲಿ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತರೆಲ್ಲ ಖಾಸಗಿ ಬಸ್ ನ ಪ್ರಯಾಣಿಕರಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಎರಡು ಬಸ್ ಗಳು ನಜ್ಜುಗುಜ್ಜಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಎಂಕೆಸಿಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಗಂಜಾಂನ ಜಿಲ್ಲಾಧಿಕಾರಿ ದಿಬ್ಯಾ ಜ್ಯೋತಿ ಪರಿದಾ ತಿಳಿಸಿದ್ದಾರೆ.
ಓರ್ವ ಬಸ್ ಚಾಲಕ ಸೇರಿ ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮತ್ತೊಬ್ಬ ಬಸ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ತನಿಖೆ ಮುಂದುವರಿದಿದೆ ಎಂದು ಬ್ರಹ್ಮಪುರದ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರವಣ್ ವಿವೇಕ್ ಎಂ ಹೇಳಿದ್ದಾರೆ.